ಪೂರ್ಣೋದ್ಯೋಗ -
	ಪೂರ್ಣೋದ್ಯೋಗವನ್ನು ಕುರಿತ ಸರ್ವಸಮ್ಮತವಾದ ವ್ಯಾಖ್ಯೆಯಿಲ್ಲ. ನಿರುದ್ಯೋಗಿಗಳಾಗಿರುವ ಜನರಿಗಿಂತ ಹೆಚ್ಚು ಸಂಖ್ಯೆಯ ಖಾಲಿ ಉದ್ಯೋಗಗಳಿದ್ದಾಗ ಪೂರ್ಣೋದ್ಯೋಗದ ಸ್ಥಿತಿ ಇರುತ್ತದೆಂದು ವಿಲಿಯಮ್ ಬೆವರಿಜ್ 1944ರಲ್ಲಿ ಹೇಳಿದ. ಆದರೆ, ಎರಡನೆಯ ಮಹಾಯುದ್ಧಾನಂತರದ ಅನುಭವದ ದೃಷ್ಟಿಯಲ್ಲಿ ಅನೇಕ ಅರ್ಥಶಾಸ್ತ್ರಜ್ಞರು ಇದನ್ನು ಪೂರ್ಣೋದ್ಯೋಗಾತೀತ ಸ್ಥಿತಿಯೆಂದು ವರ್ಣಿಸಿದ್ದಾರೆ. ಖಾಸಗಿ ಪ್ರಯತ್ನಶೀಲತೆಯಿರುವ ಗತಿಶೀಲ ಆರ್ಥಿಕತೆಯಲ್ಲಿ ಬೇಡಿಕೆ ಮತ್ತು ಪೂರೈಕೆ ಎರಡರಲ್ಲೂ ಬದಲಾವಣೆಗಳಾಗುತ್ತಿರುತ್ತವೆ. ಬಂಡವಾಳದ ದಕ್ಷತೆ ಬೆಳೆಯುತ್ತಿರುತ್ತದೆ. ರಾಷ್ಟ್ರೀಯ ವರಮಾನ ವಿಸ್ತರಿಸುತ್ತದೆ. ಇವುಗಳ ಫಲವಾಗಿ ಹೊಸ ಹೊಸ ಬಯಕೆಗಳ ಸೃಷ್ಟಿಯಾಗುತ್ತಿರುತ್ತದೆ. ಆದ್ದರಿಂದ ಕೆಲಸ ಮಾಡಲಿಚ್ಛಿಸುವ ಪ್ರತಿಯೊಬ್ಬನೂ ಸದಾ ಕಾಲವೂ ಉದ್ಯೋಗಿಯಾಗಿರುವುದು ಸಾಧ್ಯವಾಗದು. ಇಂಥ ಪರಿಸ್ಥಿತಿಯಲ್ಲಿ ಅಲ್ಪಾವಧಿಯಲ್ಲಿ ತಾತ್ಕಾಲಿಕವಾಗಿ ಕೆಲವರು ನಿರುದ್ಯೋಗಿಗಳಾಗಿರುವುದು ಅನಿವಾರ್ಯ. ಅಲ್ಪಾವಧಿಯ ತಾತ್ಕಾಲಿಕ ನಿರುದ್ಯೋಗದ ಪರಿಸ್ಥಿತಿ ಇಲ್ಲದೆ ಆರ್ಥಿಕ ಪ್ರಗತಿ ಅಸಾಧ್ಯವಾಗುತ್ತದೆ. ನಿರುದ್ಯೋಗ ಕನಿಷ್ಠ ಮಟ್ಟದಲ್ಲಿರುವ, ಖಾಲಿ ಇರುವ ಕೆಲಸಗಳ ಸಂಖ್ಯೆಗಿಂತ ನಿರುದ್ಯೋಗಿಗಳ ಸಂಖ್ಯೆ ಅಧಿಕವಾಗಿರದ ಸ್ಥಿತಿಯೇ ಪೂರ್ಣೋದ್ಯೋಗ (ಫುಲ್‍ಎಂಪ್ಲಾಯ್‍ಮೆಂಟ್) ಎಂಬುದು ತಕ್ಕ ಮಟ್ಟಿಗೆ ಸಮರ್ಪಕವೆನ್ನಬಹುದಾದ ವ್ಯಾಖ್ಯೆಯೆಂದು ಪರಿಗಣಿಸಬಹುದು. ಪೂರ್ಣೋದ್ಯೋಗದಲ್ಲಿ ಯೋಗ್ಯವೇತನದಲ್ಲಿ ಉದ್ಯೋಗ ಸಿಗುವಂತಾಗಬೇಕು. ಬೇಗನೆ ಉದ್ಯೋಗ ಸಿಗುವಂತಾಗಬೇಕು. ಕೆಲಸ ಕಳೆದುಕೊಂಡವನಿಗೆ ಬೇಗನೆ ಕೆಲಸ ಸಿಗುವ ಸಾಧ್ಯತೆ ಇರಬೇಕು. ದೇಶದಲ್ಲಿ ಸ್ವಲ್ಪಮಟ್ಟಿಗೆ ನಿರುದ್ಯೋಗಿಗಳಿದ್ದಾಗಲೂ ಪೂರ್ಣೋದ್ಯೋಗದ ಸ್ಥಿತಿ ಇದೆಯೆಂದು ಹೇಳಬಹುದು. ಯಾವುದರಲ್ಲಿ ನಿರುದ್ಯೋಗವಿದ್ದಾಗ್ಯೂ ಪುರ್ಣೋದ್ಯೋಗ ಸ್ಥಿತಿ ಇದೆ. ಎಂದು ಪರಿಗಣಿಸಬಹದು ಎಂಬುದರ ಬಗ್ಗೆ ಅಮೆರಿಕಾದ ಸಂಯುಕ್ತ ಸಂಸ್ಥಾನಗಳಲ್ಲಿ ಕೆನಡಿ ಆಡಳಿತದ ಅವಧಿಯಲ್ಲಿ ಮೊದಲ್ಗೊಂಡು ವಿಪುಲವಾದ ಚರ್ಚೆ ನಡೆದಿದೆ. ಉದ್ಯೋಗ ಸ್ಥಿತಿ ಬಹಳವಾಗಿ ಮತ್ತು ಕ್ಷಿಪ್ರವಾಗಿ ಬದಲಾವಣೆಯಾಗುವ ಮತ್ತು ನಿರುದ್ಯೋಗ ವಿಮೆ ಇರುವ ಆದೇಶದಲ್ಲಿ ಶೇ. 6ರ ಪ್ರಮಾಣದಲ್ಲಿ ನಿರುದ್ಯೋಗ ಇರುವಾಗಲೂ ಪೂರ್ಣೋದ್ಯೋಗ ಸ್ಥಿತಿ ಇದೆ ಎಂದು ಭಾವಿಸಬಹುದೆಂಬ ಅಭಿಪ್ರಾಯವನ್ನು ಒಪ್ಪಲಾಗಿದೆ. ಆದರೆ ಈ ವ್ಯಾಖ್ಯೆ ಬೇರೆ ದೇಶಗಳ ಪರಿಸ್ಥಿತಿಗೂ ಅನ್ವಯಿಸುತ್ತದೆಂದು ಹೇಳಲಾಗುವುದಿಲ್ಲ. ಪೂರ್ಣೋದ್ಯೋಗ ಸ್ಥಿತಿಯಲ್ಲೂ ನಾಲ್ಕು ಬಗೆಯ ನಿರುದ್ಯೋಗಗಳು ಇರಬಹುದು. 1. ಘರ್ಷಣಾತ್ಮಕ, 2. ಶ್ರಾಯೀಣ, 3. ತಂತ್ರ ವಿದ್ಯಾತ್ಮಕ ಮತ್ತು 4. ಸಂರಚನಾತ್ಮಕ ನಿರುದ್ಯೋಗಿಗಳು.

	ಘರ್ಷಣಾತ್ಮಕ ನಿರುದ್ಯೋಗ: ಔದ್ಯೋಗಿಕ ಘರ್ಷಣೆಯಿಂದಾಗಿ ಘರ್ಷಣಾತ್ಮಕ ನಿರುದ್ಯೋಗ ಸಂಭವಿಸುತ್ತದೆ. ಕಚ್ಚಾಸಾಮಗ್ರಿಯ ಅಭಾವದಿಂದಾಗಿಯೋ ಯಂತ್ರೋಪಕರಣಗಳು ಕೆಟ್ಟದ್ದರಿಂದಲೋ ಕೈಗಾರಿಕೋದ್ಯಮವೊಂದು ಉತ್ಪಾದನೆ ಮಾಡಲಾಗದಾಗ ತಾತ್ಕಾಲಿಕವಾಗಿ ನಿರುದ್ಯೋಗ ಹುಟ್ಟಿಕೊಳ್ಳುತ್ತದೆ. ಉದ್ಯಮ ದಿವಾಳಿ ತೆಗೆದದ್ದರಿಂದಲೋ, ಒಂದು ಉದ್ಯಮ ಸಂಸ್ಥೆಯನ್ನು ಮುಚ್ಚಿದ್ದರಿಂದಲೋ ಕೆಲಸಗಾರರು ನಿರುದ್ಯೋಗಿಗಳಾಗುತ್ತಾರೆ. ಬೇರೆ ಕಡೆ ಅವರು ಕೆಲಸ ಪಡೆಯುವ ತನಕ ನಿರುದ್ಯೋಗಿಗಳಾಗಿರುವುದು ಅನಿವಾರ್ಯ. ಈ ಸಂದರ್ಭದಲ್ಲಿ ಸಂಭವಿಸುವ ತಾತ್ಕಾಲಿಕ ನಿರುದ್ಯೋಗ ಘರ್ಷಣಾತ್ಮಕವಾದ್ದು.

	ಶ್ರಾಯೀಣ ನಿರುದ್ಯೋಗ: ಕೆಲವು ಕೈಗಾರಿಕೆಗಳು ಕೆಲವು ಋತುಗಳಲ್ಲಿ ಮಾತ್ರ ನಡೆಯುತ್ತವೆ. ಇವುಗಳಲ್ಲಿ ಕೆಲಸ ಮಾಡುವವರು ವರ್ಷದ ಕೆಲವು ಋತುಗಳಲ್ಲಿ ಉದ್ಯೋಗ ಕಳೆದುಕೊಳ್ಳುತ್ತಾರೆ. ಉದಾಹರಣೆ : ಸಕ್ಕರೆ ಕಾರ್ಖಾನೆ, ಬತ್ತದ ಗಿರಣಿ.

	ತಂತ್ರವಿದ್ಯಾತ್ಮಕ ನಿರುದ್ಯೋಗ: ಉತ್ಪಾದನೆಯ ವಿಧಾನದಲ್ಲಿ ಸದಾ ಬದಲಾವಣೆಗಳು-ಮೇಲ್ಪಾಟುಗಳು-ಆಗುತ್ತಿರುತ್ತವೆ. ಹೊಸಹೊಸ ಆವಿಷ್ಕಾರ ಮತ್ತು ಉಪಜ್ಞೆಗಳ ಪರಿಣಾಮವಾಗಿ ಆಗುವ ಬದಲಾವಣೆಗಳಿಂದಾಗಿ ಆಗಿಂದಾಗ್ಗೆ ನಿರುದ್ಯೋಗ ಉಂಟಾಗುವುದು ಸಹಜ. ಇದೂ ತಾತ್ಕಾಲಿಕವೇ.

	ಸಂರಚನಾತ್ಮಕ ನಿರುದ್ಯೋಗ: ದೇಶದ ಆರ್ಥಿಕತೆಯ ಸಂರಚನೆಯಲ್ಲಿ ಆಗುವ ಬದಲಾವಣೆಗಳಿಂದಾಗಿಯೂ ಆಗಾಗ ನಿರುದ್ಯೋಗ ಉಂಟಾಗುತ್ತದೆ. ದೇಶದ ನಿರ್ಯಾತ ವ್ಯಾಪಾರ ದೀರ್ಘಕಾಲದಲ್ಲಿ ಇಳಿಯುತ್ತಲೇ ಹೋದರೆ ನಿರ್ಯಾತ ಸರಕುಗಳನ್ನು ತಯಾರಿಸುವ ಕೈಗಾರಿಕೆಗಳಲ್ಲಿ ನಿರುದ್ಯೋಗ ಸಂಭವಿಸುತ್ತದೆ.

	ಆವರ್ತ ನಿರುದ್ಯೋಗ: ಮೇಲೆ ಹೇಳಿದ ನಾಲ್ಕು ಬಗೆಯ ನಿರುದ್ಯೋಗಳಲ್ಲದೆ ಇನ್ನೂ ಒಂದು ಬಗೆಯ ನಿರುದ್ಯೋಗ ಸಂಭವಿಸುವುದುಂಟು. ಆರ್ಥಿಕ ಚಟುವಟಿಕೆಗಳಲ್ಲಿಯ ಏರಿಳಿತಗಳಿಂದಾಗಿಯೂ ನಿರುದ್ಯೋಗ ಉಂಟಾಗುತ್ತದೆ. ಇದು ಆವರ್ತ ನಿರುದ್ಯೋಗ. ಬಂಡವಾಳವಾದಿ ವ್ಯವಸ್ಥೆಗಳಲ್ಲಿ ಆರ್ಥಿಕ ಉತ್ಕರ್ಷ ಮತ್ತು ಗರ್ತಗಳು ಒಂದಾದ ಅನಂತರ ಒಂದು ಸಂಭವಿಸುತ್ತಿರುತ್ತವೆ. ಆರ್ಥಿಕ ಉತ್ಕರ್ಷದ ಅವಧಿಯಲ್ಲಿ ಅತಿ ಉದ್ಯೋಗವೂ ಆರ್ಥಿಕ ಗರ್ತದ ಅವಧಿಯಲ್ಲಿ ಅತಿ ನಿರುದ್ಯೋಗವೂ ಸಂಭವಿಸುತ್ತದೆ. ಆರ್ಥಿಕ ಗರ್ತದ ಕಾಲದಲ್ಲಿ ಸಂಭವಿಸುವ ನಿರುದ್ಯೋಗ ತೀವ್ರವಾದ್ದು. ಆರ್ಥಿಕತೆ ಆಗ ಪೂರ್ಣೋದ್ಯೋಗದ ಮಟ್ಟಕ್ಕಿಂತ ಬಹಳ ಕೆಳಗಿನ ಮಟ್ಟದಲ್ಲಿರುತ್ತದೆ.

	ಅಭಿಜಾತ ಸಿದ್ಧಾಂತ : ರಾಷ್ಟ್ರದಲ್ಲಿ ಯಾವಾಗಲೂ ಪೂರ್ಣೋದ್ಯೋಗ ಇರುತ್ತದೆ ಎಂಬುದು ಅಭಿಜಾತ ಅರ್ಥಶಾಸ್ತ್ರಜ್ಞರ ಭಾವನೆ. ಉದ್ಯೋಗ ಬಯಸುವ ಪ್ರತಿಯೊಬ್ಬ ವ್ಯಕ್ತಿಗೂ ಉದ್ಯೋಗ ದೊರೆತರೆ ಮಾತ್ರ ರಾಷ್ಟ್ರದಲ್ಲಿ ಪೂರ್ಣೋದ್ಯೋಗ ಇರುತ್ತದೆ. ಆಗ ಉದ್ಯೋಗ ಪಡೆಯುವ ಅರ್ಹತೆ ಇದ್ದವರು ತಾವಾಗಿ ಉದ್ಯೋಗವನ್ನು ಬಯಸದಿದ್ದರೆ ವಿನಾ ನಿರುದ್ಯೋಗಿಗಳಾಗಿರಲಾರರು. ಉದ್ಯೋಗ ಮಾಡಲು ಇಷ್ಟ ಇಲ್ಲದವರು ಸೋಮಾರಿಗಳಾಗಿರಬಹುದು. ಅಂಥವರು ನಿರುದ್ಯೋಗಿಗಳಲ್ಲ. ಇಲ್ಲಿ ನಿರುದ್ಯೋಗ ಐಚ್ಛಿಕವಾದ್ದು. ಅಂದರೆ ಅಭಿಜಾತ ಅರ್ಥಶಾಸ್ತ್ರಜ್ಞರ ಪ್ರಕಾರ ಪೂರ್ಣೋದ್ಯೋಗದ ಸ್ಥಿತಿಯಲ್ಲಿ ಐಚ್ಛಿಕ ನಿರುದ್ಯೋಗ ಇರಬಹುದು. ಅನೈಚ್ಛಿಕ ನಿರುದ್ಯೋಗ ಇರುವುದೇ ಇಲ್ಲ. ಪೂರ್ಣೋದ್ಯೋಗದ ಸ್ಥಿತಿ ಇದ್ದಾಗ ಘರ್ಷಣಾತ್ಮಕ ಶ್ರಾಯೀಣ, ತಂತ್ರವಿದ್ಯಾತ್ಮಕ ಮತ್ತು ಸಂರಚನಾತ್ಮಕ ನಿರುದ್ಯೋಗಗಳು ಇರಬಹುದು.

	ಅರ್ಥ ವ್ಯವಸ್ಥೆಯಲ್ಲಿ ಸಾರ್ವತ್ರಿಕ ನಿರುದ್ಯೋಗ ಮತ್ತು ಅತಿ ಉತ್ಪಾದನೆ ಸಾಧ್ಯವೇ ಇಲ್ಲ. ಏಕೆಂದರೆ ಪೂರೈಕೆಯೇ ಬೇಡಿಕೆಯನ್ನು ಸೃಷ್ಟಿಸುತ್ತದೆ ಎನ್ನುವ ಫ್ರೆಂಚ್ ಅರ್ಥಶಾಸ್ತ್ರಜ್ಞ ಜೆ.ಬಿ. ಸೇಯ ಮಾರುಕಟ್ಟೆ ಸಿದ್ಧಾಂತವನ್ನು ಅಭಿಜಾತ ಅರ್ಥಶಾಸ್ತ್ರಜ್ಞರು ತಮ್ಮ ಸಿದ್ಧಾಂತಕ್ಕೆ ಆಧಾರವಾಗಿ ಇಟ್ಟಿಕೊಂಡಿದ್ದಾರೆ. ಪ್ರತಿಯೊಂದು ಮುಕ್ತ ಮಾರುಕಟ್ಟೆ ಅರ್ಥವ್ಯವಸ್ಥೆಯಲ್ಲೂ ಪೂರ್ಣೋದ್ಯೋಗ ಇರುತ್ತದೆ. ಆಗ ಆರ್ಥಿಕ ವ್ಯವಸ್ಥೆ ಸಮತೋಲದಲ್ಲಿದ್ದು ಗರಿಷ್ಠ ವರಮಾನ ಮತ್ತು ಉತ್ಪನ್ನಗಳಿರುತ್ತವೆ. ನಿರುದ್ಯೋಗ ಉಂಟಾಗುವುದು ಉದ್ಯೋಗ ಬಯಸುವವರು ಪ್ರಚಲಿತ ವೇತನ ಒಪ್ಪಿಕೊಳ್ಳದಿದ್ದರೆ ಅಥವಾ ದೇಶದ ಆರ್ಥಿಕ ಚಟುವಟಿಕೆಗಳಲ್ಲಿ ಸರ್ಕಾರ ಮಧ್ಯ ಪ್ರವೇಶ ಮಾಡಿದರೆ. ಆದ್ದರಿಂದ ಸರ್ಕಾರ ತಾಟಸ್ಥ್ಯ ನೀತಿಯನ್ನು ಅನುಸರಿಸಬೇಕು. ವೇತನ, ಬೆಲೆ ಮತ್ತು ಬಡ್ಡಿ ವ್ಯವಸ್ಥೆ ಕ್ರಿಯಾಶೀಲವಾದವು. ಜನರು ಗಳಿಸಿದ ವರಮಾನವಷ್ಟೂ ಖರ್ಚಾಗಬೇಕು ಇಲ್ಲವೇ ಉಳಿತಾಯವಾಗಬೇಕು. ಖರ್ಚು ಮಾಡದೆ ಉಳಿಸಿದ್ದನ್ನು ಉಳಿತಾಯವೆನ್ನಬೇಕಾದರೆ ಅದು ವಿನಿಯೋಜನೆಯಾಗಬೇಕು. ಹೀಗಾಗದೆ ಹೋದಾಗ ಸಮತೋಲ ತಪ್ಪಿ ಪೂರ್ಣೋದ್ಯೋಗ ಸ್ಥಿತಿ ತಪ್ಪುತ್ತದೆ. ಪೂರ್ಣೋದ್ಯೋಗ ಸ್ಥಿತಿಯಲ್ಲಿ ಬಡ್ಡಿದರ ಉಳಿತಾಯ ಮತ್ತು ವಿನಿಯೋಜನೆಗಳಲ್ಲಿ ಸಮತೋಲನವನ್ನು ತರುವುದು.

	ಕೇನ್ಸ್ ಸಿದ್ಧಾಂತ : ಅಭಿಜಾತ ಅರ್ಥಶಾಸ್ತ್ರಜ್ಞರು. ರೂಪಿಸಿದ ಪೂರ್ಣೋದ್ಯೋಗ ಸಿದ್ಧಾಂತ ಎಲ್ಲ ರಾಷ್ಟ್ರಗಳಲ್ಲಿ ಮನ್ನಣೆ ಪಡೆದಿತ್ತು. ಆದರೆ ಈ ಸಿದ್ಧಾಂತದ ಅನ್ವಯದಿಂದಲೇ 1929ರಲ್ಲಿ ಅಮೆರಿಕದಲ್ಲಿ ಮಹಾ ಆರ್ಥಿಕ ಮುಗ್ಗಟ್ಟು ಉಂಟಾಯಿತು. ಅನಂತರ ಇದು ಪ್ರಪಂಚಾದ್ಯಂತ ಹಬ್ಬಿತು. ಅಭಿಜಾತ ಅರ್ಥಶಾಸ್ತ್ರಜ್ಞರ ಪೂರ್ಣೋದ್ಯೋಗ ಪರಿಕಲ್ಪನೆಯಿಂದ ಆದ ಅನರ್ಥವಿದು. ಆದ್ದರಿಂದ ಕೇನ್ಸ್ ಅಭಿಜಾತ ಅರ್ಥಶಾಸ್ತ್ರಜ್ಞರ ಪೂರ್ಣೋದ್ಯೋಗ ಸಿದ್ಧಾಂತವನ್ನು ಉಗ್ರವಾಗಿ ಖಂಡಿಸಿದರು. ಅಭಿಜಾತ ಅರ್ಥಶಾಸ್ತ್ರಜ್ಞರ ಊಹೆಗಳು ತಪ್ಪು ಎಂದರು. ರಾಷ್ಟ್ರದಲ್ಲಿ ನಿರಂತರವಾಗಿ ಪೂರ್ಣೋದ್ಯೋಗ ಇರದು ಎಂಬುದು ಇವರ ವಾದ. ನಿರುದ್ಯೋಗ ವಾಸ್ತವಿಕವಾದದ್ದು. ಪೂರೈಕೆ ಬೇಡಿಕೆಯನ್ನು ನಿರ್ಮಿಸುತ್ತದೆ ಎನ್ನವುದು ತಪ್ಪು. ವೇತನದ ಕಡಿತದಿಂದ ನಿರುದ್ಯೋಗ ಸಮಸ್ಯೆ ಪರಿಹಾರವಾಗುವುದಿಲ್ಲ. ಅದರಿಂದ ನಿರುದ್ಯೋಗ ಅಧಿಕವಾಗುತ್ತದೆ. ಆರ್ಥಿಕ ಚಟುವಟಿಕೆಗಳಲ್ಲಿ ಸರ್ಕಾರ ಭಾಗವಹಿಸುವುದು ಅವಶ್ಯಕ. ಅನ್ಯಾಕ್ರಮಣದಿಂದ ರಕ್ಷಣೆ, ಆಂತರಿಕ ಭದ್ರತೆಯ ಸ್ಥಾಪನೆ ಇವು ಮಾತ್ರ ಇಂದಿನ ಸರ್ಕಾರಗಳ ಕರ್ತವ್ಯವಲ್ಲ. ಅವು ಕ್ಷೇಮಾಭ್ಯುದಯವನ್ನು ಸಾಧಿಸಬೇಕು. ಉಳಿತಾಯ ಮತ್ತು ವಿನಿಯೋಜನೆಗಳಲ್ಲಿ ಸಮತೋಲ ತರುವುದು ಬಡ್ಡಿ ದರವಲ್ಲ, ವರಮಾನದ ಮಟ್ಟ. ಅಭಿಜಾತ ಅರ್ಥಶಾಸ್ತ್ರಜ್ಞರ ಪೂರ್ಣೋದ್ಯೋಗ ಪರಿಕಲ್ಪನೆ ದೀರ್ಘ ಕಾಲಾವಧಿಯಲ್ಲಿ ನಿಜವಾದೀತು. ಆದರೆ, ದೀರ್ಘ ಕಾಲಾವಧಿಯಲ್ಲಿ ನಾವು ಯಾರೂ ಬದುಕಿರುವುದಿಲ್ಲ ಎನ್ನುತ್ತಾರೆ ಕೇನ್ಸ್.

	ಕೇನ್ಸರು ತಮ್ಮದೇ ಆದ ಉದ್ಯೋಗ ಸಿದ್ಧಾಂತವನ್ನು ನೀಡಿದ್ದಾರೆ. ಒಟ್ಟು ವರಮಾನ ಇಲ್ಲವೆ ಉತ್ಪನ್ನ ಹೆಚ್ಚಿದಂತೆ ಉದ್ಯೋಗ ಹೆಚ್ಚಾಗುತ್ತದೆ ಎಂದು ಕೇನ್ಸ್ ಹೇಳುತ್ತಾರೆ. ಉದ್ಯೋಗದ ಮಟ್ಟವನ್ನು ಪರಿಣಾಮಕಾರಿ ಬೇಡಿಕೆ ವಿರ್ಧರಿಸುತ್ತದೆ. ಅನುಭೋಗ ಮತ್ತು ವಿನಿಯೋಜನೆಯನ್ನು ಪರಿಣಾಮಕಾರಿ ಬೇಡಿಕೆ ಅವಲಂಬಿಸಿರುತ್ತದೆ. ಕುಟುಂಬದ ವರಮಾನ ಮತ್ತು ಅನುಭೋಗ ಪ್ರವೃತ್ತಿ ಇವುಗಳನ್ನು ಅನುಭೋಗ ಅವಲಂಬಿಸಿರುತ್ತದೆ. ಬಂಡವಾಳದ ಸೀಮಾಂತ ದಕ್ಷತೆ ಮತ್ತು ಬಡ್ಡಿ ದರಗಳನ್ನು ವಿನಿಯೋಜನೆ ಅವಲಂಬಿಸಿರುತ್ತದೆ. ನಿರೀಕ್ಷಿತ ಪ್ರತಿಫಲ ಮತ್ತು ಬಂಡವಾಳ ಪೂರೈಕೆಯ ಬೆಲೆಗಳನ್ನು ಬಂಡವಾಳದ ಸೀಮಾಂತ ದಕ್ಷತೆ ಅವಲಂಬಿಸಿರುತ್ತದೆ. ಒಟ್ಟು ಹಣದ ಪೂರೈಕೆ ಮತ್ತು ನಗದು ಹಣದೊಲವು ಇವೆರಡನ್ನೂ ಬಡ್ಡಿದರ ಅವಲಂಬಿಸಿರುತ್ತದೆ. ವ್ಯವಹಾರ ಪ್ರವೃತ್ತಿ, ಮುಂಜಾಗ್ರತೆಯ ಪ್ರವೃತ್ತಿ ಮತ್ತು ಸಟ್ಟಾ ಪ್ರವೃತ್ತಿಗಳನ್ನು ನಗದು ಹಣದೊಲವು ಅವಲಂಬಿಸಿರುತ್ತದೆ.

	ಪರಿಣಾಮಕಾರಿ ಬೇಡಿಕೆ = ರಾಷ್ಟ್ರೀಯ ವರಮಾನ (ಥಿ)
	= ರಾಷ್ಟ್ರೀಯ ಉತ್ಪನ್ನ(o)
	= ಒಟ್ಟು ವಿನಿಯೋಗ
	= ಅನುಭೋಗದ ಖರ್ಚು (ಛಿ) + ವಿನಿಯೋಜನೆ (I)
	= ಉದ್ಯೋಗ

ಪರಿಣಾಮಕಾರಿ ಬೇಡಿಕೆಯ ನಿರ್ಣಾಯಕ ಅಂಶಗಳು ಎರಡು : 1 ಸಮಗ್ರ ಬೇಡಿಕೆಯ ಪರಿಮಾಣ, 2 ಸಮಗ್ರ ಪೂರೈಕೆಯ ಪರಿಮಾಣ. ಇವೆರಡೂ ಉದ್ಯೋಗ ಮಟ್ಟವನ್ನು ನಿರ್ಧರಿಸುವುದರಲ್ಲಿ ಸಹಾಯ ಮಾಡುತ್ತವೆ. ಇವೆರಡರ ಪರಸ್ಪರ ಕ್ರಿಯೆಯ ಫಲವಾದ ಉದ್ಯೋಗ ಮಟ್ಟವನ್ನು ರೇಖಾಚಿತ್ರದಲ್ಲಿ ತೋರಿಸಲಾಗಿದೆ.

ಚಿತ್ರ-1

	ರೇಖಾಚಿತ್ರದಲ್ಲಿ ಇಯಲ್ಲಿ ಸಮಗ್ರ ಪೂರೈಕೆ ರೇಖೆಯನ್ನು (ZZ) ಸಮಗ್ರ ಬೇಡಿಕೆ ರೇಖೆ (ಆಆ) ಛೇದಿಸುತ್ತದೆ. ಇಯಲ್ಲೇ ಪರಿಣಾಮಕಾರಿ ಬೇಡಿಕೆ ನಿರ್ಧಾರವಾಗುತ್ತದೆ. ಸಮಗ್ರ ಬೇಡಿಕೆ ರೇಖೆಯ (ಆಆ) ಮೇಲೆ ಒ'.ಇ.ಕಿ. ಇವೆ. ಆದರೆ ಇಯಲ್ಲಿ ಮಾತ್ರವೇ ಪರಿಣಾಮಕಾರಿ ಬೇಡಿಕೆ ನಿರ್ಧಾರವಾಗುತ್ತದೆ. ಇದು ಸಮತೋಲ ಬಿಂದು. ಉದ್ಯಮ ಸಂಚಾಲಕರು ಒದಗಿಸುವ ಉದ್ಯೋಗ ಮಟ್ಟ (ಔಓ) ಈ ಬಿಂದುವಿನಲ್ಲಿ ನಿರ್ಧರಿಸಲ್ಪಡುತ್ತದೆ. ಔಓ ಉದ್ಯೋಗಮಟ್ಟದಲ್ಲಿ ಔಖ ವೆಚ್ಚ. ಉದ್ಯಮಿಗಳು ವಹಿಸಲು ಸಿದ್ಧವಿರುವ ವೆಚ್ಚ ಇದು. ಉದ್ಯೋಗದ ಮಟ್ಟ ಔಒ ಇದ್ದಾಗ ಸಮಗ್ರ ಬೇಡಿಕೆಯ ಪರಿಮಾಣ ಒ'ಖಿ ಇದ್ದರೆ, ಸಮಗ್ರ ಪೂರೈಕೆಯ ಪರಿಮಾಣ ಒಖಿ ಇರುತ್ತದೆ. ಆಗ ವಿಕ್ರಯದ ಒಟ್ಟು ಮೊತ್ತ, ಎಂದರೆ ವರಮಾನ, ಒಟ್ಟು ಉತ್ಪಾದನಾ ವೆಚ್ಚಕ್ಕಿಂತ ಅಧಿಕ. ಆದ್ದರಿಂದ ಉದ್ಯಮಿಗಳು ಇನ್ನು ಹೆಚ್ಚು ಜನರಿಗೆ ಉದ್ಯೋಗಾವಕಾಶಗಳನ್ನೂ ಒದಗಿಸಲು ಮುಂದಾಗುತ್ತಾರೆ. ಉದ್ಯೋಗದ ಪರಿಮಾಣ ಔಓ ಆಗುವವರೆಗೆ ಅವರು ಜನರಿಗೆ ಕೆಲಸ ಒದಗಿಸುತ್ತಾರೆ.

	ಉದ್ಯೋಗದ ಮಟ್ಟ ಔಏ ಇದ್ದರೆ ಆಗ ಒಟ್ಟು ಉತ್ಪಾದನಾ ವೆಚ್ಚ ಒಟ್ಟು ವಿಕ್ರಯದಿಂದ ಬರುವ ವರಮಾನಕ್ಕಿಂತ ಅಧಿಕ. ಒಟ್ಟು ಉತ್ಪಾದನಾ ವೆಚ್ಚ ಏ'ಏ ಇದ್ದರೆ ವರಮಾನ ಕಿಏ ಇರುತ್ತದೆ. ಆದ್ದರಿಂದ ಏ'ಕಿ ಅಧಿಕ ವೆಚ್ಚವನ್ನು ತೋರಿಸುತ್ತದೆ. ಆಗ ಉದ್ಯಮಿಗಳು ನಷ್ಟ ಅನುಭವಿಸುತ್ತಾರೆ. ಆದ್ದರಿಂದ ಅವರು ಕೆಲವು ಜನರನ್ನು ಕೆಲಸದಿಂದ ತೆಗೆದುಹಾಕುತ್ತಾರೆ. ಉತ್ಪಾದನಾ ವೆಚ್ಚವನ್ನೂ ಉದ್ಯೋಗದ ಮಟ್ಟವನ್ನೂ ಕಡಿಮೆ ಮಾಡುತ್ತಾರೆ. ಉದ್ಯೋಗದ ಪರಿಮಾಣ ಔಓ ಆಗುವವರೆಗೆ ಈ ಕಾರ್ಯಾಚರಣೆ ನಡೆಯುತ್ತದೆ. ಉದ್ಯೋಗ ಮಟ್ಟ ಔಓ ಇದ್ದಾಗ ಮಾತ್ರ ಒಟ್ಟು ಉತ್ಪಾದನಾವೆಚ್ಚ ವಿಕ್ರಯದ ಮೊತ್ತಕ್ಕೆ ಸಮವಾಗಿರುತ್ತದೆ. ಇ ಯಲ್ಲಿ ಸಮಗ್ರ ಬೇಡಿಕೆಯ ಪರಿಮಾಣ ಮತ್ತು ಸಮಗ್ರ ಪೂರೈಕೆಯ ಪರಿಮಾಣ ಸಮವಾಗಿರುತ್ತವೆ. ಇ ಸಮತೋಲ ಬಿಂದುವಾಗಿದ್ದರೂ ಅದು ಪೂರ್ಣೋದ್ಯೋಗದ ಸಮತೋಲ ಬಿಂದುವಾಗಿರಬೇಕೆಂದೇನೂ ಅಲ್ಲ. ಎಂದರೆ ಔಓ ಉದ್ಯೋಗಮಟ್ಟ ಪೂರ್ಣೋದ್ಯೋಗ ಮಟ್ಟವೇ ಎಂದಲ್ಲ. ಅದು ಅಪೂರ್ಣೋದ್ಯೋಗ ಮಟ್ಟವಾಗಿಯೋ ಪೂರ್ಣೋದ್ಯೋಗ ಮಟ್ಟವಾಗಿಯೋ ಅತ್ಯುದ್ಯೋಗ ಮಟ್ಟವಾಗಿಯೋ ಇರಬಹುದು. ಔಓ ಕೇವಲ ಸಮತೋಲದ ಮಟ್ಟವಾಗಿದೆಯೆಂಬುವುದನ್ನು ಮಾತ್ರ ಸೂಚಿಸುತ್ತದೆ. ಎಂದರೆ ಆರ್ಥಿಕ ವ್ಯವಸ್ಥೆಯಲ್ಲಿ ಸಮಗ್ರ ಬೇಡಿಕೆಯ ಪರಿಮಾಣ ಮತ್ತು ಸಮಗ್ರ ಪೂರೈಕೆಯ ಪರಿಮಾಣಗಳು ಸಮವಾಗಿದ್ದಾಗ ಪರಿಣಾಮಕಾರಿ ಬೇಡಿಕೆ ನಿರ್ಧರಿಸಲ್ಪಟ್ಟು, ತನ್ಮೂಲಕ ಉದ್ಯೋಗ ಮಟ್ಟ ನಿರ್ಧರಿತವಾಗುತ್ತದೆ. ಆಗ ಆರ್ಥಿಕತೆ ಸಮತೋಲದಲ್ಲಿರುತ್ತದೆ. ಸಮಗ್ರ ಬೇಡಿಕೆಯ ಪರಿಮಾಣ ಮತ್ತು ಪೂರೈಕೆಯ ಪರಿಮಾಣ ಇವು ಉದ್ಯೋಗದ ಯಾವ ಮಟ್ಟದಲ್ಲಾದರೂ ಸಮವಾಗಬಹುದು. ಅವೆರಡೂ ಪೂರ್ಣೋದ್ಯೋಗದ ಮಟ್ಟದಲ್ಲಿ ಸಮವಾಗಬೇಕಾದರೆ, ಪೂರ್ಣೋದ್ಯೋಗವನ್ನು ಒದಗಿಸಲು ವರಮಾನ ಮತ್ತು ಅನುಭೋಗಗಳಲ್ಲಿಯ ಅಂತರವನ್ನು ತುಂಬುವ ಮಟ್ಟಿಗೆ ವಿನಿಯೋಜನೆಗಾಗಿ ಬೇಡಿಕೆ ಹೆಚ್ಚಬೇಕು. ಆದರೆ, ಈ ಅಂತರವನ್ನು ತುಂಬುವ ಮಟ್ಟಿಗೆ ವಿನಿಯೋಜನೆಯ ಬೇಡಿಕೆ ಇರುವುದಿಲ್ಲವೆಂದೂ ಅದ್ದರಿಂದ ಸಮಗ್ರ ಬೇಡಿಕೆಯ ಪರಿಮಾಣ ಮತ್ತು ಸಮಗ್ರ ಪೂರೈಕೆಯ ಪರಿಮಾಣಗಳು ಪೂರ್ಣೋದ್ಯೋಗಕ್ಕಿಂತಲೂ ಕಡಿಮೆಯ ಉದ್ಯೋಗ ಮಟ್ಟದಲ್ಲಿಯೇ ಸಮವಾಗುತ್ತವೆಂದು ಕೇನ್ಸ್ ಪ್ರತಿಪಾದಿಸಿದರು. ಇದು ಅಪೂರ್ಣೋದ್ಯೋಗ ಸಮತೋಲ.

	ಕೇನ್ಸರ ಪೂರ್ಣೋದ್ಯೋಗ ಪರಿಕಲ್ಪನೆಯಲ್ಲಿ ಅಭಿಜಾತ ಅರ್ಥಶಾಸ್ತ್ರಜ್ಞರ ಪೂರ್ಣೋದ್ಯೋಗ ಪರಿಕಲ್ಪನೆಯಲ್ಲಿ ಸೇರಿದ ಘರ್ಷಣಾತ್ಮಕ, ಶ್ರಾಯೀಣ ಮತ್ತು ಸಂರಚನಾತ್ಮಕ ನಿರುದ್ಯೋಗ ಸ್ಥಿತಿಗಳು ಸೇರುತ್ತವೆ. ಕೆಲವು ಸಲ ಪರಿಣಾಮಕಾರಿ ಬೇಡಿಕೆಯ ಹೆಚ್ಚಳದಿಂದ ಉದ್ಯೋಗಾವಕಾಶ ಮತ್ತು ಉತ್ಪಾದನೆ ಹೆಚ್ಚುವ ಬದಲು ಬೆಲೆ ಮಾತ್ರ ಅಧಿಕವಾಗುತ್ತದೆ. ಏಕೆಂದರೆ ಆಗ ಉದ್ಯೋಗ ಪಡೆಯುವ ಅರ್ಹತೆ ಇದ್ದವರೆಲ್ಲ ಉದ್ಯೋಗದಲ್ಲಿ ತೊಡಗಿರುತ್ತಾರೆ. ಇಂಥ ಸ್ಥಿತಿ ಪೂರ್ಣೋದ್ಯೋಗ ಸ್ಥಿತಿ. ಪೂರ್ಣೋದ್ಯೋಗಸ್ಥಿತಿಯ ಹಂತವನ್ನು ಮೀರಿದಾಗ ಉದ್ಯೋಗ ಇನ್ನೂ ಹೆಚ್ಚದು. ಆಗ ಬೆಲೆ ಮಾತ್ರ ಏರುತ್ತದೆ ಎಂದು ಕೇನ್ಸ್ ಹೇಳುತ್ತಾರೆ. ಪೂರ್ಣೋದ್ಯೋಗ ಎರಡು ಸಮಸ್ಯೆಗಳನ್ನು ಎತ್ತುತ್ತದೆ. ಒಂದನೆಯದು, ಪ್ರಸಕ್ತ ವೇತನ ದರದಲ್ಲಿ ಎಷ್ಟು ಜನರು ಕೆಲಸ ಮಾಡಲು ಬಯಸುತ್ತಾರೆ. ಅವರು ದಿನಕ್ಕೆ ಎಷ್ಟು ಗಂಟೆ ಕಾಲ ದುಡಿಯ ಬಯಸುತ್ತಾರೆ ಎನ್ನುವುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಎರಡನೆಯದು, ಘರ್ಷಣಾತ್ಮಕ, ಶ್ರಾಯೀಣ ಸಂರಚನಾತ್ಮಕ ನಿರುದ್ಯೋಗ ಕನಿಷ್ಠ ಮಿತಿ ಯಾವುದೆನ್ನುವುದನ್ನು ನಿರ್ಧರಿಸಬೇಕಾಗುತ್ತದೆ. ಈ ಎರಡು ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿದ ಅನಂತರ ದೇಶದಲ್ಲಿ ನಿರುದ್ಯೋಗ ಇದೆಯೆ ಇಲ್ಲವೆ ಎನ್ನುವುದನ್ನು ನಿರ್ಧರಿಸಲು ಸಾಧ್ಯವಾಗುತ್ತದೆ. ರಾಷ್ಟ್ರದಲ್ಲಿ ದುಡಿಯುವವರ ಸಂಖ್ಯೆ ಅವಲಂಬಿಸಿರುವುದು ಜನಸಂಖ್ಯೆ, ಶಿಕ್ಷಣ, ಉದ್ಯೋಗಾವಕಾಶ ಇವನ್ನು. ಜನಸಂಖ್ಯೆ ಮತ್ತು ಶಿಕ್ಷಣ ಹೆಚ್ಚಿದಂತೆ, ಉದ್ಯೋಗ ಪಡೆಯುವ ಅರ್ಹತೆಯುಳ್ಳವರ ಸಂಖ್ಯೆ ಹೆಚ್ಚುತ್ತದೆ. ರಾಷ್ಟ್ರದಲ್ಲಿ ಐಚ್ಛಿಕ ನಿರುದ್ಯೋಗಿಗಳು ಎಷ್ಟ ಜನರಿದ್ದಾರೆ, ಸ್ವಂತ ಉದ್ಯೋಗಾವಲಂಬಿಗಳು ಎಷ್ಟು ಜನ ಇದ್ದಾರೆ ಎನ್ನುವುದನ್ನು ನೋಡಬೇಕು. 

	ಅಭಿವರ್ಧಿತ ರಾಷ್ಟ್ರಗಳಲ್ಲಿ ಆವರ್ತ ನಿರುದ್ಯೋಗವೂ ಕಂಡುಬರುತ್ತದೆ. ವ್ಯವಹಾರಗಳು ಏರಿಳಿತಗಳು ಇಂಥ ನಿರುದ್ಯೋಗಕ್ಕೆ ಕಾರಣ. ಆವರ್ತ ನಿರುದ್ಯೋಗದ ಸಮಸ್ಯೆಯನ್ನು ನಿವಾರಿಸುವುದೇ ಹಣದ ನೀತಿ, ಕೋಶೀಯ ನೀತಿ ಮತ್ತು ಇತರ ನೀತಿಗಳನ್ನು ಅಭಿವರ್ಧಿತ ರಾಷ್ಟ್ರ ಅನುಷ್ಠಾನಕ್ಕೆ ತರುತ್ತದೆ. ಅಭಿವೃದ್ಧಿ ಹೊಂದದ ರಾಷ್ಟ್ರಗಳ ಪರಿಸ್ಥಿತಿ ಬೇರೆ. ಅಭಿವರ್ಧಿತ ರಾಷ್ಟ್ರಗಳಲ್ಲಿ ನಿರುದ್ಯೋಗ ಉಂಟಾಗುವುದು ಪರಿಣಾಮಕಾರಿ ಬೇಡಿಕೆಯ ಕೊರತೆಯಿಂದಾದರೆ ಅನಭಿವರ್ಧಿತ ರಾಷ್ಟ್ರಗಳಲ್ಲಿ ನಿರುದ್ಯೋಗ ಉಂಟಾಗುವುದು ಬಂಡವಾಳದ ಕೊರತೆಯಿಂದ. ಅನಭಿವರ್ಧಿತ ರಾಷ್ಟ್ರಗಳಲ್ಲಿ ಜನಸಂಖ್ಯೆ ಹೆಚ್ಚು. ಆದ್ದರಿಂದ ಕಾರ್ಮಿಕರ ಸಂಖ್ಯೆ ಹೆಚ್ಚು, ಆದರೆ ಉದ್ಯೋಗಾವಕಾಶಗಳು ಕಡಿಮೆ. ಇಲ್ಲಿ ನೈಸರ್ಗಿಕ ಸಂಪನ್ಮೂಲಗಳು ವಿಫುಲ. ಆದರೆ ಬಂಡವಾಳದ ಕೊರತೆ. ಆದ್ದರಿಂದ ನೈಸರ್ಗಿಕ ಸಂಪನ್ಮೂಲಗಳನ್ನು ಆರ್ಥಿಕ ಅಭಿವೃದ್ಧಿಗಾಗಿ ಬಳಸಲು ಸಾಧ್ಯವಾಗುತ್ತಿಲ್ಲ. ಇಲ್ಲಿ ಬಂಡವಾಳದ ಶೇಖರಣೆಯ ದರವೂ ಕಡಿಮೆ. ಬಂಡವಾಳವನ್ನು ಹೂಡಿದಂತೆ ಉದ್ಯೋಗಾವಕಾಶಗಳು ಹೆಚ್ಚುತ್ತವೆ. ಆಧರೆ, ಅನಭಿವರ್ಧಿತ ರಾಷ್ಟ್ರಗಳಲ್ಲಿ ಇದು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಈ ರಾಷ್ಟ್ರಗಳಲ್ಲಿ ನಿರುದ್ಯೋಗದ್ದು ಗಂಭೀರ ಮತ್ತು ಜಟಿಲ ಸಮಸ್ಯೆ. ಅನಭಿವರ್ಧಿತ ರಾಷ್ಟ್ರಗಳಲ್ಲಿ ಜನಸಂಖ್ಯೆಯ ಬೆಳವಣಿಗೆಯ ದರವೂ ಹೆಚ್ಚು, ಆದ್ದರಿಂದ ಉದ್ಯೋಗಾರ್ಥಿಗಳ ಸಂಖ್ಯೆ ಹೆಚ್ಚುತ್ತಲೇ ಇರುತ್ತದೆ. ಆದ್ದರಿಂದಲೂ ಇಲ್ಲಿ ನಿರುದ್ಯೋಗದ ಪರಿಮಾಣ ಏರುತ್ತಲೇ ಹೋಗುತ್ತದೆ.

	ಅನಭಿವರ್ಧಿತ ರಾಷ್ಟ್ರಗಳ ನಗರ ಪ್ರದೇಶಗಳಲ್ಲಿ ನಿರುದ್ಯೋಗ ಪ್ರಮುಖವಾಗಿರುತ್ತದೆ. ಗ್ರಾಮ ಪ್ರದೇಶಗಳಲ್ಲಿ ಅಪೂರ್ಣೋದ್ಯೋಗ, ಪ್ರಚ್ಛನ್ನ ನಿರುದ್ಯೋಗ ಅಧಿಕ. ಅನಭಿವರ್ಧಿತ ರಾಷ್ಟ್ರದ ಗ್ರಾಮ ಪ್ರದೇಶಗಳ ಉದ್ಯೋಗ ಕೃಷಿ. ಕೃಷಿಕರಿಗೆ ಇದು ಪೂರ್ಣೋದ್ಯೋಗವನ್ನು ಒದಗಿಸುವುದಿಲ್ಲ. ಕೆಲವು ತಿಂಗಳುಗಳಲ್ಲಿ ಅವರು ನಿರುದ್ಯೋಗಿಗಳಾಗಿರುತ್ತಾರೆ. ಆದ್ದರಿಂದ ಇಲ್ಲಿ ಅಪೂರ್ಣೋದ್ಯೋಗ ಬಹಳ, ಇಲ್ಲಿ ನೆಲದ ಪ್ರತಿಯೊಂದು ಏಕಮಾನದ ಸಾಗುವಳಿಯಲ್ಲಿ ನಿರತರಾಗಿರುವವರ ಸಂಖ್ಯೆ ಅಧಿಕ. ಅನೇಕರಿಗೆ ವಾಸ್ತವವಾಗಿ ಸಾಕಷ್ಟು ಕೆಲಸ ಇಲ್ಲದಿದ್ದರೂ ಅವರು ನಿರುದ್ಯೋಗಿಗಳೆಂದು ಲೆಕ್ಕಕ್ಕೆ ಬರುವುದಿಲ್ಲ. ಅವರು ಪ್ರಚ್ಛನ್ನ ನಿರುದ್ಯೋಗ. ಅನಭಿವರ್ಧಿತ ರಾಷ್ಟ್ರಗಳಲ್ಲಿ ಕೃಷಿವಲಯದಲ್ಲಿ ಸೇಕಡ 20ರಿಂದ 25ರ ವರೆಗೆ ಪ್ರಚ್ಛನ್ನ ನಿರುದ್ಯೋಗಿಗಳಿದ್ದಾರೆಂದು ರ್ಯಾಗ್ನರ್ ನಕ್ರ್ಸ್ ಹೇಳಿದ್ದಾರೆ. ಆದ್ದರಿಂದ ಅನಭಿವರ್ಧಿತ ರಾಷ್ಟ್ರಗಳಲ್ಲಿ ಆವರ್ತ ನಿರುದ್ಯೋಗದ ಜೊತೆಗೆ ಅಪೂರ್ಣೋದ್ಯೋಗ ಮತ್ತು ಪ್ರಚ್ಛನ್ನ ನಿರುದ್ಯೋಗ ಸಮಸ್ಯೆಗಳನ್ನೂ ನಿವಾರಿಸಬೇಕಾಗಿದೆ. ಇದು ಅಷ್ಟು ಸುಲಭವಲ್ಲ.

	ರಾಷ್ಟ್ರದಲ್ಲಿ ಖಾಸಗಿ ವ್ಯಕ್ತಿಗಳು ಮತ್ತು ಸಂಸ್ಥೆಗಳು ತೊಡಗುವುದು ಲಾಭದಾಯಕ ಆರ್ಥಿಕ ಚಟುವಟಿಕೆಗಳಲ್ಲಿ ಮಾತ್ರ. ಆದ್ದರಿಂದ ನಿರುದ್ಯೋಗವನ್ನು ನಿವಾರಿಸುವ ಕಾರ್ಯಕ್ರಮಗಳನ್ನು ಜಾರಿಗೆ ತರುವುದು ಸರ್ಕಾರಕ್ಕೆ ಮಾತ್ರ ಸಾಧ್ಯ ಎಂದು ಕೆ.ಕೆ. ಕುರಿಹರ ಹೇಳುತ್ತಾರೆ. ಖಾಸಗಿ ವ್ಯಕ್ತಿಗಳು ಮತ್ತು ಸಂಸ್ಥೆಗಳು ಲೋಕೋಪಯೋಗಿ ಮತ್ತು ಸಾರ್ವಜನಿಕ ಹಿತದೃಷ್ಟಿಯ ಕಾಮಗಾರಿಗಳನ್ನು ಕೈಗೊಳ್ಳುವುದಿಲ್ಲ. ಖಾಸಗಿ ವ್ಯಕ್ತಿಗಳಲ್ಲಿ ಮತ್ತು ಸಂಸ್ಥೆಗಳಲ್ಲಿ ಇಂಥ ಕಾಮಗಾರಿಗಳನ್ನು ಕಾರ್ಯಗತ ಮಾಡಲು ಬೇಕಾದ ಬಂಡವಾಳ ಇರದು. ಇದಕ್ಕೆ ಬೇಕಾದ ಬಂಡವಾಳವನ್ನು ಎತ್ತಲು ಅವರಿಗೆ ಆಗದು. ಸರ್ಕಾರಕ್ಕೆ ಮಾತ್ರ ಸಾಧ್ಯ. ಎಲ್ಲರಿಗೂ ಉದ್ಯೋಗ ಒದಗಿಸಿ ಪೂರ್ಣೋದ್ಯೋಗವನ್ನು ಸಾಧಿಸಲು ಅದು ಕಾರ್ಯಪ್ರವೃತ್ತವೇಗಬೇಕಾಗುತ್ತದೆ.

	ಪೂರ್ಣೋದ್ಯೋಗದ ಮಹತ್ತ್ವ : ಪೂರ್ಣೋದ್ಯೋಗದಿಂದ ವ್ಯಕ್ತಿಗಳಿಗೆ ಮತ್ತು ರಾಷ್ಟ್ರಕ್ಕೆ ಅನೇಕ ಪ್ರಯೋಜನಗಳಿವೆ; 1 ಪೂರ್ಣೋದ್ಯೋಗ ವ್ಯಕ್ತಿಗಳ ಆರ್ಥಿಕ ಭದ್ರತೆಯನ್ನು ಹೆಚ್ಚಿಸುತ್ತದೆ. ಅದು ಸರಕು ಸೇವೆಗಳ ಉತ್ಪಾದನೆ ಮತ್ತು ಅನುಭೋಗವನ್ನು ಹೆಚ್ಚಿಸುತ್ತದೆ. 2 ಭದ್ರತೆಯಿಂದ ಆರ್ಥಿಕ ಪ್ರಗತಿಗೆ ಉತ್ತೇಜನ ಸಿಗುತ್ತದೆ. 3 ಪೂರ್ಣೋದ್ಯೋಗದಿಂದ ಮನುಷ್ಯನ ಸ್ಥಾನಮಾನ ಗೌರವ ಪ್ರತಿಷ್ಠೆಗಳು ಹೆಚ್ಚುತ್ತದೆ. 4 ವರ್ಣದ್ವೇಷ, ಮತೀಯ ಅಥವಾ ಕೋಮು ತಾರತಮ್ಯ ಮುಂತಾದವು ದುರ್ಬಲಗೊಳ್ಳುತ್ತವೆ. 5 ದೇಶದ ವರಮಾನ ಮತ್ತು ಸಂಪತ್ತಿನ ಸಮಾನ ವಿತರಣೆಗೆ ಪೂರ್ಣೋದ್ಯೋಗ ಪರೋಕ್ಷವಾಗಿ ಸಹಾಯ ಮಾಡುತ್ತದೆ. 6 ಪ್ರಜಾಪ್ರಭುತ್ವವನ್ನು ರಕ್ಷಿಸಲು ಪೂರ್ಣೋದ್ಯೋಗ ಅಗತ್ಯ. 7 ಪೂರ್ಣೋದ್ಯೋಗ ಯುದ್ಧವನ್ನು ತಡೆಯಲು ನೆರವಾಗುತ್ತದೆ. 8 ಪೂರ್ಣೋದ್ಯೋಗ ಉದಾರವಾದಕ್ಕೆ ಪುನಶ್ಚೈತನ್ಯವನ್ನು ತುಂಬುತ್ತದೆ.

	ನಿರುದ್ಯೋಗಿಯಾಗಿದ್ದವನಿಗೆ ಉದ್ಯೋಗ ಸಿಕ್ಕಾಗ ಆತ ಸರಕುಗಳನ್ನು ಉತ್ಪಾದಿಸುತ್ತಾನೆ. ಇದು ನಿರುದ್ಯೋಗ ಮತ್ತು ಪ್ರಚ್ಛನ್ನ ನಿರುದ್ಯೋಗ ಸಮಸ್ಯೆಗಳನ್ನು ಬಗೆಹರಿಸುತ್ತದೆ. ಪೂರ್ಣೋದ್ಯೋಗ ಶ್ರಮದ ಚಲನೆಯನ್ನು ಪ್ರೋತ್ಸಾಹಿಸುವುದರಿಂದ ಉತ್ಪಾದಕ ಸಂಪನ್ಮೂಲಗಳ ದಕ್ಷ ಬಳಕೆ ಸಾಧ್ಯವಾಗುತ್ತದೆ. ವ್ಯಕ್ತಿಯ ಭದ್ರತೆಯನ್ನು ಪೂರ್ಣೋದ್ಯೋಗ ಹೆಚ್ಚಿಸುವುದರಿಂದ ಅದು ಶೋಷಣೆಯನ್ನು ತಡೆಯುತ್ತದೆ. ಉದ್ಯೋಗದಾತರು ಇತರೆ ಉದ್ಯೋಗದಾತರೊಂದಿಗೆ ಪೈಪೋಟಿ ನಡೆಸುವಾಗ, ತಾವು ನೇಮಕ ಮಾಡಿಕೊಂಡ ವ್ಯಕ್ತಿಗಳು ಕೆಲಸದಲ್ಲಿ ಮುಂದುವರಿಯುವಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತಾನೆ. ಉದ್ಯೋಗಿಗಳಿಗೆ ಮನ್ನಣೆ ದೊರಕುತ್ತದೆ. ಅವರ ವರಮಾನ ಹೆಚ್ಚುತ್ತದೆ. ಪೂರ್ಣೋದ್ಯೋಗ ಆರ್ಥಿಕ ಅಸಮಾನತೆಯ ನಿವಾರಣೆಗೆ ನೆರವಾಗುತ್ತದೆ.

	ಪೂರ್ಣೋದ್ಯೋಗ ಮತ್ತು ಹಣ ನೀತಿ: ಅನುಭೋಗ ವಿನಿಯೋಜನೆಗಳಲ್ಲಿ ಒಂದು ದೇಶದ ವರಮಾನ ವಿನಿಯೋಗವಾಗುತ್ತದೆಯೆಂದು ಕೇನ್ಸ್ ಹೇಳುತ್ತಾರೆ. ವರಮಾನ, ಉತ್ಪತ್ತಿ ಮತ್ತು ಉದ್ಯೋಗಗಳನ್ನು ಹೆಚ್ಚಿಸಲು ಸರ್ಕಾರ ಅನುಭೋಗ ಮತ್ತು ವಿನಿಯೋಜನೆಗಳನ್ನು ಹೆಚ್ಚಿಸಬೇಕು. ಹಣ ನೀತಿ ಪೂರ್ಣೋದ್ಯೋಗವನ್ನು ಸಾಧಿಸುವ ಒಂದು ಸಾಧನೆ. ಅದು ಅನುಭೋಗ ಮತ್ತು ವಿನಿಯೋಜನೆಗಳನ್ನು ಹೆಚ್ಚಿಸಬೇಕು. ಇದರಿಂದ ಭಾರೀ ನಿರುದ್ಯೋಗ ಸಮಸ್ಯೆಯ ನಿವಾರಣೆಯಾಗುತ್ತದೆ. ಅಲ್ಪಾವಧಿಯಲ್ಲಿ ಚಾಲ್ತಿ ಹಣ ಮತ್ತು ಉದರಿಗೆ ಸಂಬಂಧಿಸಿದ ಸರ್ಕಾರದ ನೀತಿಯೇ ಹಣನೀತಿ. ಹಣನೀತಿ ರಾಷ್ಟ್ರದಲ್ಲಿ ಚಲಾವಣೆಯಲ್ಲಿರುವ ಹಣ ಮತ್ತು ಉದರಿಯ ಪರಿಮಾಣ ನಿರ್ಧರಿಸುವುದು. ಅವನ್ನು ಆರ್ಥಿಕ ಚಟುವಟಿಕೆಗಳಿಗೆ ಒದಗಿಸುವ ವಿಧಾನಗಳನ್ನು ನಿರ್ಧರಿಸುವುದು ಹಣನೀತಿ. ಆರ್ಥಿಕ ಗರ್ತ ಮತ್ತು ನಿರುದ್ಯೋಗ ಇದ್ದಾಗ ಖಾಸಗಿ ವಿನಿಯೋಜನೆ ತಗ್ಗುತ್ತದೆ. ಆರ್ಥಿಕ ಗರ್ತದಿಂದ ಅರ್ಥವ್ಯವಸ್ಥೆಯನ್ನು ಮೇಲೆತ್ತಲು ಸರ್ಕಾರ ಖಾಸಗಿ ವಿನಿಯೋಜನೆಯನ್ನು ಪ್ರೇರೇಪಿಸಬೇಕು. ಅಗ್ಗದ ಹಣದ ನೀತಿಯನ್ನು ಕಾರ್ಯಗತ ಮಾಡುವುದರ ಮೂಲಕ ಖಾಸಗಿ ವಿನಿಯೋಜನೆಯನ್ನು ಪ್ರೇರೇಪಿಸುವುದೆಂದು ಕೇನ್ಸ್ ಹೇಳುತ್ತಾರೆ. ಅಗ್ಗದ ಹಣನೀತಿ ಎಂದರೆ ಕಡಿಮೆ ಬಡ್ಡಿದರದಲ್ಲಿ ಯಾವುದೇ ನಿರ್ಬಂಧಗಳಿಲ್ಲದೆ ಸಾಲಗಳನ್ನು ಒದಗಿಸುವುದು. ರಾಷ್ಟ್ರದ ಲಭ್ಯ ಸಂಪನ್ಮೂಲಗಳನ್ನು ಬಳಸಿಕೊಂಡು ಉದ್ಯೋಗಾರ್ಥಿಗಳಿಗೆಲ್ಲ ಉದ್ಯೋಗ ಒದಗಿಸಿ ಪೂರ್ಣೋದ್ಯೋಗವನ್ನು ಸಾಧಿಸುವುದು ಅಗ್ಗದ ಹಣದ ನೀತಿಯ ಇಷ್ಟ ಗುರಿ.

	ಪರಿಣಾಮಕಾರಿ ಬೇಡಿಕೆಯ ಕೊರತೆಯಿಂದಾಗಿ ನಿರುದ್ಯೋಗ ಸಂಭವಿಸುತ್ತದೆಂದು, ಕೇನ್ಸ್ ಹೇಳುತ್ತಾರೆ. ಪರಿಣಾಮಕಾರಿ ಬೇಡಿಕೆ ಅನುಭೋಗ ಮತ್ತು ವಿನಿಯೋಜನೆಗಳಿಂದ ನಿರ್ಧರಿಸಲ್ಪಡುತ್ತದೆ. ನಿರುದ್ಯೋಗ ಮತ್ತು ಆರ್ಥಿಕ ಗರ್ತದ ಕಾಲದಲ್ಲಿ ಕೇವಲ ಸರ್ಕಾರ ಮಾತ್ರ ಬಂಡವಾಳವನ್ನು ತೊಡಗಿಸಲು ಶಕ್ತ. ತೊಡಗಿಸಿದ ಬಂಡವಾಳ ಹೆಚ್ಚುತ್ತ ಹೋದಂತೆ ಉದ್ಯೋಗಾವಕಾಶಗಳು ಹೆಚ್ಚುತ್ತ ಹೋಗುತ್ತವೆ. ಅಗ್ಗದ ಹಣದ ನೀತಿಯನ್ನು ದೇಶದ ಕೇಂದ್ರೀಯ ಬ್ಯಾಂಕು ಕಾರ್ಯಗತ ಮಾಡಿ ಖಾಸಗಿ ಬಂಡವಾಳ ಹೂಡುವವರಿಗೆ ಪ್ರೋತ್ಸಾಹ ನೀಡಬೇಕಾಗುತ್ತದೆ. ಕಡಿಮೆ ಬಡ್ಡಿ ದರದಲ್ಲಿ ಹೆಚ್ಚು ಹೆಚ್ಚು ಹಣ ಸಿಗುವಂತಾದರೆ ಮತ್ತು ಹಣದ ಚಲಾವಣೆಯನ್ನು ಹೆಚ್ಚಿಸಿದರೆ ವಿನಿಯೋಜನೆಯನ್ನು ಸುಲಭವಾಗಿ ಹೆಚ್ಚಿಸಲು ಸಾಧ್ಯ. ಅಗ್ಗದ ಹಣದ ನೀತಿಯನ್ನು ಕಾರ್ಯಗತ ಮಾಡುವುದರಿಂದ ಕೆಲವು ಪ್ರಯೋಜನಗಳಿವೆ. 1. ಅಗ್ಗದ ಹಣದ ನೀತಿ ಬಂಡವಾಳ ಮಾರುಕಟ್ಟೆಯ ಮೇಲೆ ಆರೋಗ್ಯಕಾರಿ ಪರಿಣಾಮ ಬೀರುವುದರಿಂದ ಹೊಸದಾಗಿ ಬಂಡವಾಳ ಹೂಡಲು ಉತ್ತೇಜನ ನೀಡುತ್ತದೆ. 2. ದೀರ್ಘಕಾಲಿಕ ಬಂಡವಾಳ ರೂಪಣೆಗೆ ಅಗ್ಗದ ಹಣದ ನೀತಿ ಉತ್ತೇಜನಕಾರಿಯಾಗಿದೆ. 3. ಅದು ಅನುಭೋಗದ ಖರ್ಚನ್ನು ಹೆಚ್ಚಿಸುತ್ತದೆ. 4. ಅದರಿಂದ ಬ್ಯಾಂಕುಗಳ ಹಣದ ಸ್ಥಿತಿ ಭದ್ರಗೊಳ್ಳುತ್ತದೆ. 5. ಅದು ಹಣದ ಚಲಾವಣೆಯಲ್ಲಿ ಇಳಿತವಾಗದಂತೆ ತಡೆಯುತ್ತದೆ. 6. ವರಮಾನ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸಿ, ತನ್ಮೂಲಕ ಪೂರ್ಣೋದ್ಯೋಗ ಸ್ಥಿತಿಯನ್ನು ಸಾಧಿಸುತ್ತದೆ. 7. ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವಲ್ಲಿ ವೇತನ ಕಡಿತದ ನೀತಿಗಿಂತ ಅಗ್ಗದ ಹಣದ ನೀತಿ ಹೆಚ್ಚು ಪ್ರಯೋಜನಕಾರಿ ಮತ್ತು ಪರಿಣಾಮಕಾರಿ ಎಂದು ಕೆ.ಕೆ. ಕುರಿಹರ ಹೇಳುತ್ತಾರೆ. 8. ಸಾರ್ವಜನಿಕ ವಿನಿಯೋಜನೆಗಳನ್ನು ಪ್ರೇರೇಪಿಸಲೂ ಅಗ್ಗದ ಹಣದ ನೀತಿ ಸಾಲದ ಸೌಲಭ್ಯ ಒದಗಿಸುತ್ತದೆ.

	ಅಗ್ಗದ ಹಣದ ನೀತಿಯನ್ನು ಈ ರೀತಿ ಅನುಷ್ಠಾನಕ್ಕೆ ತರಬಹುದು; 1. ಕೇಂದ್ರೀಯ ಬ್ಯಾಂಕು ತನ್ನ ಬಡ್ಡಿದರವನ್ನು ಇಳಿಸುವುದು. ಇದರಿಂದ ಹಣದ ಮಾರುಕಟ್ಟೆಯ ಬಡ್ಡಿದರಗಳೂ ಇಳಿಯುತ್ತವೆ. 2. ಮುಕ್ತ ಮಾರುಕಟ್ಟೆಯಲ್ಲಿ ಕೇಂದ್ರೀಯ ಬ್ಯಾಂಕಿನಿಂದ ಪ್ರತಿಭೂತಿಗಳ (ಸೆಕ್ಯೂರಿಟಿಸ್) ಕೊಳ್ಳುವಿಕೆ. ಇದರಿಂದ ವಾಣಿಜ್ಯ ಬ್ಯಾಂಕುಗಳಿಗೆ ಹೆಚ್ಚು ಹೆಚ್ಚು ಹಣ ಬರುತ್ತದೆ. ಪ್ರತಿಭೂತಿಗಳನ್ನು ವಿಕ್ರಯ ಮಾಡಿದವರ ಕೈಗೆ ಹೆಚ್ಚು ಹಣ ಬರುತ್ತದೆ. ಇದರ ಒಟ್ಟು ಪರಿಣಾಮವೆಂದರೆ ಉದರಿಯ ಹಿಗ್ಗುವಿಕೆ. 3 ಕೇಂದ್ರೀಯ ಬ್ಯಾಂಕು ವಾಣಿಜ್ಯ ಬ್ಯಾಂಕುಗಳ ನಗದು ಸಿಲ್ಕು ಅನುಪಾತವನ್ನು ಕಡಿಮೆ ಮಾಡುವುದು. ವಾಣಿಜ್ಯ ಬ್ಯಾಂಕುಗಳು ಹೆಚ್ಚು ಸಾಲ ನೀಡಲು ಇದರಿಂದ ಸಾಧ್ಯವಾಗುತ್ತದೆ.

	ಈ ಎಲ್ಲ ಕ್ರಮಗಳಿಂದ ಹೊಸದಾಗಿ ಹೂಡುವ ಬಂಡವಾಳಕ್ಕೆ ಉತ್ತೇಜನ ಸಿಗುತ್ತದೆ. ಇದರಿಂದ ವರಮಾನ ಉತ್ಪತ್ತಿ ಮತ್ತು ಉದ್ಯೋಗಗಳು ಹೆಚ್ಚುತ್ತವೆ. ಈ ಕ್ರಮಗಳಿಂದ ಹಂತಹಂತವಾಗಿ ಉದ್ಯೋಗಾರ್ಥಿಗಳೆಲ್ಲರಿಗೂ ಉದ್ಯೋಗ ಸಿಗುವಂತಾಗುತ್ತದೆ. ಎಂದರೆ ರಾಷ್ಟ್ರದಲ್ಲಿ ಪೂರ್ಣೋದ್ಯೋಗ ಸ್ಥಿತಿ ಪ್ರಾಪ್ತವಾಗುತ್ತದೆ. ಈ ಸ್ಥಿತಿ ಪ್ರಾಪ್ತವಾಗುವತನಕ ವಿನಿಯೋಜನೆಗಳನ್ನು ಹೆಚ್ಚಿಸುತ್ತಲೇ ಹೋಗಬೇಕು. ಅಂದರೆ ಮಾತ್ರ ವರಮಾನ, ಉತ್ಪಾದನೆ ಮತ್ತು ಉದ್ಯೋಗಗಳು ಹೆಚ್ಚುತ್ತವೆ. ಬೆಲೆ ಏರುತ್ತದೆ. ಪೂರ್ಣೋದ್ಯೋಗಸ್ಥಿತಿ ಪ್ರಾಪ್ತವಾದಾಗ ಆರ್ಥಿಕ ಸ್ಥಿರತೆಯನ್ನು ಕಾಯ್ದುಕೊಳ್ಳಲು ಕ್ರಮಗಳನ್ನು ಕೈಗೊಳ್ಳಬೇಕು. ಪೂರ್ಣೋದ್ಯೋಗ ಸ್ಥಿತಿ ಪ್ರಾಪ್ತವಾದ ಅನಂತರ ವಿನಿಯೋಜನೆಗಳನ್ನು ಹೆಚ್ಚಿಸಿದರೆ ಬೆಲೆಗಳು ಮಾತ್ರ ಏರುತ್ತ ಹೋಗುತ್ತವೆ. ಉತ್ಪಾದನೆ ಮತ್ತು ಉದ್ಯೋಗಾವಕಾಶಗಳು ಹೆಚ್ಚುವುದಿಲ್ಲ. ಆದ್ದರಿಂದ ಆ ಘಟ್ಟ ಮುಟ್ಟಿದಾಗ ಆರ್ಥಿಕ ಸ್ಥಿರತೆ ಕಾಯ್ದುಕೊಳ್ಳುವುದು ಅವಶ್ಯ.

	ಅಗ್ಗದ ಹಣದ ನೀತಿಯನ್ನು ಅನುಸರಿಸಿದ ಅಭಿವೃದ್ಧಿ ರಾಷ್ಟ್ರದಲ್ಲಿ ಆರ್ಥಿಕ ಗರ್ತ ಮತ್ತು ನಿರುದ್ಯೋಗಗಳನ್ನು ಹೋಗಲಾಡಿಸಬಹುದು. ಅನಭಿವರ್ಧಿತ ರಾಷ್ಟ್ರಗಳೂ ನಿರುದ್ಯೋಗ ಮತ್ತು ಆರ್ಥಿಕ ಗರ್ತಗಳನ್ನು ಹೋಗಲಾಡಿಸಿ ಆರ್ಥಿಕ ಉತ್ಕರ್ಷವನ್ನು ಸಾಧಿಸುವುದು ಸಾಧ್ಯ. ಆದರೆ ಅನಭಿವರ್ಧಿತ ರಾಷ್ಟ್ರದಲ್ಲಿ ನಿರುದ್ಯೋಗ ಮಾತ್ರವಲ್ಲದೆ ಅಪೂರ್ಣೋದ್ಯೋಗ ಮತ್ತು ಪ್ರಚ್ಛನ್ನ ನಿರುದ್ಯೋಗಗಳು ಇರುತ್ತವೆಂಬುದನ್ನು ಹಿಂದೆಯೇ ಹೇಳಲಾಗಿದೆ. ಈ ಎಲ್ಲ ಸಮಸ್ಯೆಗಳನ್ನೂ ಅಗ್ಗದ ಹಣದ ನೀತಿಯ ಮೂಲಕ ನಿವಾರಿಸಬಹುದೆಂದು ವಾದಿಸಲಾಗಿದೆ. ಅನಭಿವರ್ಧಿತ ರಾಷ್ಟ್ರ ನಿರುದ್ಯೋಗ, ಹಣದುಬ್ಬರ ಮತ್ತು ಆರ್ಥಿಕ ಅಭಿವೃದ್ಧಿ ಸಮಸ್ಯೆಗಳನ್ನು ಎದುರಿಸಬೇಕಾಗಿರುತ್ತದೆ. ಕೇವಲ ಹಣ ನೀತಿಯೊಂದೇ ಅಭಿವರ್ಧಿತ ಮತ್ತು ಅನಭಿವರ್ಧಿತ ರಾಷ್ಟ್ರಗಳಲ್ಲಿ ಪೂರ್ಣೋದ್ಯೋಗವನ್ನು ಸಾಧಿಸದು. ಪೂರ್ಣೋದ್ಯೋಗ ಸ್ಥಿತಿಯ ಪ್ರಾಪ್ತಿಗಾಗಿ ಅಗ್ಗದ ಹಣದ ನೀತಿಯೊಂದಿಗೆ ರಾಜಸ್ವ ಮತ್ತು ಇತರ ನೀತಿಗಳೂ ಅಗತ್ಯವಾಗುತ್ತವೆ. 

	ಪೂರ್ಣೋದ್ಯೋಗ ಮತ್ತು ಕೋಶೀಯ ನೀತಿ : ಪೂರ್ಣೋದ್ಯೋಗವನ್ನು ಸಾಧಿಸಲು ಕೋಶೀಯ ನೀತಿ ಒಂದು ಪರಿಣಾಮಕಾರಿ ಸಾಧನ. ಆರ್ಥಿಕ ಗರ್ತ ಮತ್ತು ನಿರುದ್ಯೋಗಗಳನ್ನು ಹೋಗಲಾಡಿಸಲು ಕೋಶೀಯ ನೀತಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಕೇನ್ಸ್ ಹೇಳುತ್ತಾರೆ. ಸರ್ಕಾರದ ತೆರಿಗೆಗಳ ನೀತಿ, ಸರ್ಕಾರದ ಖರ್ಚಿನ ನೀತಿ ಮತ್ತು ಸರ್ಕಾರದ ಸಾಲ ನೀತಿಗಳು ಸೇರಿ ಕೋಶೀಯ ನೀತಿ ಎನಿಸುತ್ತದೆ. ಒಟ್ಟಿನಲ್ಲಿ ಕೋಶೀಯ ನೀತಿ ಆಯವ್ಯಯ ನೀತಿಯನ್ನು ಸೂಚಿಸುತ್ತದೆ. ಆರ್ಥಿಕ ಗರ್ತ ಮತ್ತು ನಿರುದ್ಯೋಗಗಳನ್ನು ಹೋಗಲಾಡಿಸಲು ಮತ್ತು ಪೂರ್ಣೋದ್ಯೋಗ ಸ್ಥಿತಿಯನ್ನು ಸ್ಥಾಪಿಸಲು ಅನುಸರಿಸಬೇಕಾದ ಕೋಶೀಯ ನೀತಿ ಹೀಗಿರುತ್ತದೆ; 1. ಆಯವ್ಯಯ ನೀತಿ : ಸರ್ಕಾರ ಯಾವಾಗಲೂ ಸಮತೋಲ ಆಯ-ವ್ಯಯ ನೀತಿಯನ್ನು ರೂಪಿಸಬೇಕು ಎಂದು ಅಭಿಜಾತ ಅರ್ಥಶಾಸ್ತ್ರಜ್ಞರು ಭಾವಿಸಿದ್ದರು. ಆದರೆ ಕೇನ್ಸರ ಅಭಿಪ್ರಾಯ ಬೇರೆ. ಆರ್ಥಿಕ ಗರ್ತ ಮತ್ತು ನಿರುದ್ಯೋಗದ ಅವಧಿಯಲ್ಲಿ ಆರ್ಥಿಕ ಚಟುವಟಿಕೆಗಳನ್ನು ವಿಸ್ತರಿಸಬೇಕಾದರೆ ಪರಿಣಾಮಕಾರಿ ಬೇಡಿಕೆಯನ್ನು ಹೆಚ್ಚಿಸಬೇಕು. ಗರ್ತದ ಅವಧಿಯಲ್ಲಿ ಖಾಸಗಿ ವ್ಯಕ್ತಿಗಳು ಮತ್ತು ಸಂಸ್ಥೆಗಳು ಬಂಡವಾಳ ಹೂಡಲು ಮುಂದೆ ಬರುವುದಿಲ್ಲ. ಆದ್ದರಿಂದ ಸರ್ಕಾರ ಜನರ ವರಮಾನ ಮತ್ತು ಅನುಭೋಗಗಳನ್ನು ಹೆಚ್ಚಿಸಿ, ತನ್ಮೂಲಕ ಪರಿಣಾಮಕಾರಿ ಬೇಡಿಕೆಯನ್ನು ಹೆಚ್ಚಿಸಲು ಕೊರತೆಯ ಮುಂಗಡ ಪತ್ರವನ್ನು ಮಂಡಿಸಿ ಬೃಹದ್ಗಾತ್ರದಲ್ಲಿ ತನ್ನ ಖರ್ಚುಗಳನ್ನು ಹೆಚ್ಚಿಸಬೇಕು. ಆರ್ಥಿಕ ಗರ್ತದ ಅವಧಿಯಲ್ಲಿ ತೆರಿಗೆಗಳ ಮೂಲಕ ಸರ್ಕಾರಕ್ಕೆ ದೊರಕುವ ಆದಾಯ ಕಡಿಮೆ ಇರುತ್ತದೆ. ಆದರೆ ಆಗ ಸರ್ಕಾರ ತನ್ನ ಆಯಕ್ಕಿಂತಲೂ ಹೆಚ್ಚು ವ್ಯಯ ಮಾಡಬೇಕಾಗುತ್ತದೆ. ಸರ್ಕಾರದ ಆಯಕ್ಕಿಂತ ಅದರ ವ್ಯಯ ಅಧಿಕವಾಗಿದ್ದರೆ ಮುಂಗಡಪತ್ರ ಕೊರತೆಯದೆನಿಸುತ್ತದೆ. ಈ ಕೊರತೆಯನ್ನು ಬ್ಯಾಂಕುಗಳಿಂದ ಸಾಲದ ರೂಪದಲ್ಲಾಗಲಿ, ಹೊಸದಾಗಿ ನೋಟುಗಳ ಚಲಾವಣೆ ಮಾಡಿಯಾಗಲಿ ತುಂಬಿಕೊಳ್ಳಬಹುದು. ಕೊರತೆಯ ಮುಂಗಡಪತ್ರದ ಮೂಲಕ ಸರ್ಕಾರ ಅಪಾರ ಹಣವನ್ನು ಖರ್ಚು ಮಾಡುವುದರಿಂದ ಉದ್ಯೋಗಾರ್ಥಿಗಳಿಗೆ ಉದ್ಯೋಗಾವಕಾಶಗಳು ದೊರೆತು, ಅವರ ವರಮಾನ ಹೆಚ್ಚಾಗುತ್ತದೆ. ಅದು ಅಧಿಕವಾದಂತೆ ಅವರ ಅನುಭೋಗ ಖರ್ಚು ಹೆಚ್ಚುತ್ತದೆ. ಆಗ ಅನುಭೋಗ ಸರಕುಗಳಿಗೆ ಬೇಡಿಕೆ ಹೆಚ್ಚುತ್ತದೆ. ಅನುಭೋಗ ಸರಕುಗಳನ್ನು ಉತ್ಪಾದಿಸಲು ವಿನಿಯೋಜನೆ ಹೆಚ್ಚುತ್ತದೆ. ಆಗ ಮತ್ತೆ ಉದ್ಯೋಗಾವಕಾಶಗಳು ಅಧಿಕವಾಗುತ್ತದೆ. ಬೆಲೆಗಳು ನಿಧಾನವಾಗಿ ಏರಲು ಪ್ರಾರಂಭಿಸುವುದರಿಂದ ಖಾಸಗಿ ವ್ಯಕ್ತಿಗಳ ಮತ್ತು ಸಂಸ್ಥೆಗಳ ವಿನಿಯೋಜನೆಯೂ ಹೆಚ್ಚುತ್ತದೆ. ಹೀಗೆ ಕೊರತೆಯ ಮುಂಗಡ ಪತ್ರದ ಮೂಲಕ ಸರ್ಕಾರ ನಿರುದ್ಯೋಗ ಮತ್ತು ಗರ್ತಗಳನ್ನು ಸುಲಭವಾಗಿ ಎದುರಿಸಲು ಸಾಧ್ಯ. 

	2. ತೆರಿಗೆ ನೀತಿ : ಪರಿಣಾಮಕಾರಿ ಬೇಡಿಕೆಯನ್ನು ಹೆಚ್ಚಿಸಲು ಸರ್ಕಾರ ತೆರಿಗೆ ಇಳಿಸುವ ನೀತಿ ಅನುಸರಿಸುತ್ತದೆ. ಕೆಲವು ತೆರಿಗೆ ದರಗಳನ್ನು ಇಳಿಸುವುದರಿಂದ ಮತ್ತು ಇನ್ನು ಕೆಲವು ತೆರಿಗೆಗಳನ್ನು ಸಂಪೂರ್ಣವಾಗಿ ರದ್ದು ಮಾಡುವುದರಿಂದ ಜನರಲ್ಲಿ ಖರ್ಚು ಮಾಡಲು ಹೆಚ್ಚಿನ ಹಣ ಉಳಿಯುತ್ತದೆ. ಆಗ ಅನುಭೋಗ ಖರ್ಚು ಹೆಚ್ಚುತ್ತದೆ. ಎಂದರೆ ಅನುಭೋಗ ಸರಕು ಸೇವೆಗಳಿಗೆ ಬೇಡಿಕೆ ಹೆಚ್ಚಾಗಿ ಒಟ್ಟು ಬೇಡಿಕೆ ಹೆಚ್ಚಾಗುತ್ತದೆ. ಅಂದರೆ ಆಗ ಆರ್ಥಿಕ ಚಟುವಟಿಕೆಗಳು ಹಂತ ಹಂತವಾಗಿ ವಿಸ್ತಾರಗೊಳ್ಳಲು ಪ್ರಾರಂಭವಾಗಿ ಉತ್ಪಾದನೆ, ವರಮಾನ ಮತ್ತು ಉದ್ಯೋಗ ಹೆಚ್ಚುತ್ತ ಹೋಗುತ್ತವೆ. ದಿನ ಬಳಕೆಯ ಸರಕುಗಳ ಮೇಲೆ ವಿಧಿಸುವ ತೆರಿಗೆಗಳನ್ನೂ ಕಡಿಮೆ ವರಮಾನ ವರ್ಗಗಳ ಮೇಲೆ ವಿಧಿಸುವ ಪ್ರತ್ಯಕ್ಷ ತೆರಿಗೆಗಳನ್ನೂ ಕಡಿಮೆ ಮಾಡಬೇಕು. ಕಡಿಮೆ ವರಮಾನದ ಜನರ ಅನುಭೋಗ ಪ್ರವೃತ್ತಿ ಅಧಿಕವಾಗಿರುವುದರಿಂದ ಅವರ ಮೇಲಿನ ತೆರಿಗೆಯ ಭಾರವನ್ನು ಕಡಿಮೆ ಮಾಡಿದಾಗ ಅವರ ಅನುಭೋಗ ಖರ್ಚು ಹೆಚ್ಚುತ್ತದೆ. ಪರಿಣಾಮಕಾರಿ ಬೇಡಿಕೆಯನ್ನು ಹೆಚ್ಚಿಸಲು ವಿನಿಯೋಜನೆಯನ್ನು ಹೆಚ್ಚಿಸುವುದು ಅಗತ್ಯ. ಇದಕ್ಕಾಗಿ ಉದ್ಯಮಿಗಳು ಮತ್ತು ಕಂಪನಿಗಳು ಕೊಡಬೇಕಾಗುವ ವರಮಾನ ತೆರಿಗೆಯನ್ನು ತಗ್ಗಿಸಬೇಕು. ಇದರಿಂದ ಬಂಡವಾಳದ ಸೀಮಾಂತ ದಕ್ಷತೆ ಅಧಿಕವಾಗುತ್ತದೆ. ಆಗ ಖಾಸಗಿ ವಿನಿಯೋಜನೆ ಹೆಚ್ಚುತ್ತದೆ.

	3. ಸರ್ಕಾರದ ಖರ್ಚಿನ ನೀತಿ : ರಾಷ್ಟ್ರ ಆರ್ಥಿಕ ಗರ್ತ ಮತ್ತು ನಿರುದ್ಯೋಗದಿಂದ ಬಳಲುತ್ತಿರುವಾಗ ಸರ್ಕಾರ ತನ್ನ ಖರ್ಚನ್ನು ಹೆಚ್ಚಿಸುವ ನೀತಿ ಅನುಸರಿಸುತ್ತದೆ. ಜನರಿಗೆ ಪ್ರತ್ಯಕ್ಷ ಪರಿಹಾರ ಒದಗಿಸುವುದರ ಮೂಲಕ ಮತ್ತು ಸಾರ್ವಜನಿಕ ಕಾಮಗಾರಿಗಳ ಮೂಲಕ ಸರ್ಕಾರ ಇದನ್ನು ಹೆಚ್ಚಿಸಬೇಕು. ನಿರುದ್ಯೋಗ ಪರಿಹಾರ, ವೃದ್ಧಾಪ್ಯ ವೇತನ, ನಗದು ಪರಿಹಾರ ಇವು ಪ್ರತ್ಯಕ್ಷ ಪರಿಹಾರ ವಿಧಾನಗಳು. ಇವುಗಳಿಗಾಗಿ ಸರ್ಕಾರ ಖರ್ಚು ಮಾಡಿದಾಗ ಆ ಹಣವನ್ನು ಪಡೆದ ಜನರ ಅನುಭೋಗ ಖರ್ಚು ಹೆಚ್ಚಿ ಒಟ್ಟು ಬೇಡಿಕೆ ಅಧಿಕವಾಗುತ್ತದೆ. ಬೇಡಿಕೆ ಅಧಿಕವಾದಾಗ ಉತ್ಪಾದನಾ, ವರಮಾನ ಮತ್ತು ಉದ್ಯೋಗ ಹೆಚ್ಚುತ್ತವೆ. ರಸ್ತೆ ನಿರ್ಮಾಣ, ಕಟ್ಟಡ ನಿರ್ಮಾಣ, ನೀರಾವರಿ ಯೋಜನೆಗಳು ಮುಂತಾದ ಲೋಕೋಪಯೋಗಿ ಕಾಮಗಾರಿಗಳನ್ನು ಜಾರಿಗೆ ತಂದು ಸರ್ಕಾರ ಜನರಿಗೆ ಉದ್ಯೋಗಗಳನ್ನು ಒದಗಿಸಿ ಹಣವನ್ನು ಖರ್ಚು ಮಾಡಬಹುದು. ಉದ್ಯೋಗ, ವರಮಾನ ಹೆಚ್ಚಿದಾಗ ಜನ ಅನುಭೋಗ ಖರ್ಚು ಹೆಚ್ಚಿ ಪರಿಣಾಮಕಾರಿ ಬೇಡಿಕೆ ಹೆಚ್ಚುತ್ತದೆ. ಈ ರೀತಿಯಾಗಿ ಮಾಡಿದ ಖರ್ಚುಗಳಿಂದ ಉದ್ಯೋಗಾರ್ಥಿಗಳಿಗೆ ಉದ್ಯೋಗಾವಕಾಶಗಳು ಲಭಿಸುವುದರ ಜೊತೆಗೆ ಸಾರ್ವಜನಿಕ ಆಸ್ತಿಗಳ ನಿರ್ಮಾಣವೂ ಆಗುತ್ತದೆ.

	4. ಸರ್ಕಾರದ ಸಾಲದ ನೀತಿ : ಸರ್ಕಾರ ತನ್ನ ಮುಂಗಡ ಪತ್ರದ ಕೊರತೆಯನ್ನು ಎರಡು ರೀತಿಯಲ್ಲಿ ಭರಿಸಿಕೊಳ್ಳಬಹುದು : 1. ಸಾಲ ಎತ್ತುವುದು 2. ಕೊರತೆಯ ಹಣ ವಿನಿಯೋಗ, ಸರ್ಕಾರ ಸಾಲ ಎತ್ತಲು ಮುಂದೆ ಬಂದಾಗ ಸಾರ್ವಜನಿಕರು ತಮ್ಮಲ್ಲಿರುವ ಹೆಚ್ಚುವರಿ ಹಣವನ್ನು ಸಾಲಕ್ಕಾಗಿ ಕೊಡುತ್ತಾರೆ. ಸರ್ಕಾರ ಈ ಹಣವನ್ನು ವಿನಿಯೋಜನೆಗಾಗಿ ಉಪಯೋಗಿಸಬಹುದಾಗಿದೆ. ಸರ್ಕಾರ ಸಾಲದ ಬಡ್ಡಿ ದರಗಳನ್ನು ಕಡಿಮೆ ಮಾಡಬೇಕು. ಅದು ಶ್ರೀಮಂತರಿಂದಲೇ ಹೆಚ್ಚಿನ ಸಾಲಗಳನ್ನು ಎತ್ತಬೇಕು

	ಮೇಲೆ ವಿವರಿಸಿದ ಕೋಶೀಯ ನೀತಿ ಅಭಿವರ್ಧಿತ ರಾಷ್ಟ್ರಗಳ ಆವರ್ತ ನಿರುದ್ಯೋಗ ಮತ್ತು ಆರ್ಥಿಕ ಗರ್ತಗಳನ್ನು ಹೋಗಲಾಡಿಸಲು ಅಗತ್ಯ. ಅನಭಿವರ್ಧಿತ ರಾಷ್ಟ್ರಗಳ ಆವರ್ತ ನಿರುದ್ಯೋಗ, ಪ್ರಚ್ಛನ್ನ ನಿರುದ್ಯೋಗ ಮತ್ತು ಅಪೂರ್ಣೋದ್ಯೋಗಗಳನ್ನು ಹೋಗಲಾಡಿಸಲು ಬೇರೆ ಬಗೆಯ ಕೋಶೀಯ ನೀತಿಯೇ ಬೇಕು. ಅನಭಿವರ್ಧಿತ ರಾಷ್ಟ್ರಗಳಲ್ಲಿ ಆರ್ಥಿಕ ಪ್ರಗತಿಯನ್ನು ಸಾಧಿಸಿ ಪೂರ್ಣೋದ್ಯೋಗವನ್ನು ಸ್ಥಾಪಿಸುವ ರೀತಿಯಲ್ಲಿ ಕೋಶೀಯ ನೀತಿಯಲ್ಲಿ ರೂಪಿಸುವುದು ಅಗತ್ಯ.

	ಅನಭಿವರ್ಧಿತ ರಾಷ್ಟ್ರಗಳು ತಮ್ಮ ವರಮಾನದ ಬಹುಭಾಗವನ್ನು ನಿರ್ಯಾತದಿಂದ ಪಡೆಯುತ್ತವೆ. ಅವು ಅಭಿವರ್ಧಿತ ರಾಷ್ಟ್ರಗಳಿಗೆ ಕಚ್ಚಾ ಸಾಮಗ್ರಿ ಮತ್ತು ಮೂಲವಸ್ತುಗಳನ್ನು ರಪ್ತು ಮಾಡುತ್ತವೆ. ತಮಗೆ ಬೇಕಾಗುವ ಸಿದ್ಧ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತವೆ. ಅಭಿವರ್ಧಿತ ರಾಷ್ಟ್ರಗಳಲ್ಲಿ ಆವರ್ತ ನಿರುದ್ಯೋಗ ಸಂಭವಿಸಿದಾಗ ಅನಭೀವರ್ಧಿತ ರಾಷ್ಟ್ರಗಳಲ್ಲಿ ನಿರ್ಯಾತ ವ್ಯಾಪಾರ ಕುಸಿಯುತ್ತದೆ. ಇದರಿಂದ ಅನಭಿವರ್ಧಿತ ರಾಷ್ಟ್ರಗಳಲ್ಲೂ ಆವರ್ತ ನಿರುದ್ಯೋಗ ಸಂಭವಿಸುತ್ತದೆ. ಆಗ ನಿರ್ಯಾತ ಕುಸಿತದ ಮತ್ತು ಆಯಾತ ಹೆಚ್ಚಳದ ಸ್ಥಿತಿ ಪ್ರಾಪ್ತವಾಗಿ ಅನಭಿವರ್ಧಿತ ರಾಷ್ಟ್ರಗಳು ವಿದೇಶಿ ವಿನಿಮಯ ಕೊರತೆಯಿಂದ ತುಂಬ ತೊಂದರೆಗೆ ಈಡಾಗುತ್ತವೆ. ಆದ್ದರಿಂದ ವಿದೇಶಿ ವ್ಯಾಪಾರದ ಕುಸಿತದಿಂದ ಉಂಟಾಗುವ ಆವರ್ತ ನಿರುದ್ಯೋಗವನ್ನು ನಿವಾರಿಸಲು ಅನಭಿವರ್ಧಿತ ರಾಷ್ಟ್ರದ ಸರ್ಕಾರ ತನ್ನ ಆರ್ಥಿಕ ವ್ಯವಸ್ಥೆಯನ್ನು ವೈವಿಧ್ಯಗೊಳಿಸುವ ಮತ್ತು ನವೀಕರಿಸುವ ಕೋಶೀಯ ನೀತಿಯನ್ನು ಜಾರಿಗೆ ತರಬೇಕು. ಅದು ಬಂಡವಾಳ ನಿರ್ಮಾಣಕ್ಕೆ ಆದ್ಯತೆ ನೀಡುವ ಕೋಶೀಯ ನೀತಿಯನ್ನೇ ಕಾರ್ಯಗತ ಮಾಡಬೇಕು. ಬಂಡವಾಳ ನಿರ್ಮಾಣ ಮತ್ತು ಆರ್ಥಿಕ ಯೋಜನೆಗಳಿಂದ ಆರ್ಥಿಕ ವ್ಯವಸ್ಥೆಯನ್ನು ಬಲಪಡಿಸಲು ಸಾಧ್ಯ. ಇವುಗಳಿಂದ ಆವರ್ತ ನಿರುದ್ಯೋಗ, ಪ್ರಚ್ಛನ್ನ ನಿರುದ್ಯೋಗ ಮತ್ತು ಅಪೂರ್ಣೋದ್ಯೋಗಗಳನ್ನೂ ನಿವಾರಿಸಲು ಸಾಧ್ಯ. ಇವು ದೀರ್ಘಕಾಲಿಕ ಕಾರ್ಯಕ್ರಮಗಳು. ಬಂಡವಾಳ ನಿರ್ಮಾಣ ಮತ್ತು ಆರ್ಥಿಕ ಯೋಜನೆಗಳಿಂದ ಅಭಿವೃದ್ಧಿಯನ್ನು ಸಾಧಿಸುವಂಥ ಕೋಶೀಯ ನೀತಿಯ ಉದ್ದೇಶಗಳು ಹೀಗಿವೆ : 1 ಅನುಭೋಗವನ್ನು ನಿಯಂತ್ರಿಸಿ ಉಳಿತಾಯಗಳನ್ನು ಹೆಚ್ಚಿಸುವುದು. 2 ವಿನಿಯೋಜನೆಗಳನ್ನು ಹೆಚ್ಚಿಸುವುದು, 3 ಉತ್ಪಾದನಾ ಚಟುವಟಿಕೆಗಳಲ್ಲಿ ಮಾತ್ರ ವಿನಿಯೋಜನೆ ಹೆಚ್ಚಾಗುವಂತೆ ಉತ್ತೇಜನ ನೀಡುವುದು, 4 ವರಮಾನ ಮತ್ತು ಸಂಪತ್ತಿನ ವಿತರಣೆಯಲ್ಲಿರುವ ಅಸಮಾನತೆಯನ್ನು ತಗ್ಗಿಸುವುದು. ಈ ನಾಲ್ಕು ಉದ್ದೇಶಗಳಲ್ಲಿ ಮೊದಲಿನ ಮೂರು ಉದ್ದೇಶಗಳ ಸಾಧನೆಯಿಂದ ರಾಷ್ಟ್ರದ ಉತ್ಪನ್ನ ಹೆಚ್ಚುತ್ತದೆ. ಇದರಿಂದ ಉದ್ಯೋಗಾವಕಾಶಗಳು ಹೆಚ್ಚಾಗಿ ನಿರುದ್ಯೋಗ ತಗ್ಗುತ್ತ ಹೋಗುತ್ತದೆ. ನಾಲ್ಕನೆಯ ಉದ್ದೇಶದ ಸಾಧನೆಯಿಂದ ಉತ್ಪಾದಿಸಿದ ಸಂಪತ್ತಿನ ಸಮಾನ ವಿತರಣೆಯಾಗುತ್ತದೆ. ಇದರಿಂದ ಜನತೆಗೆ ಆರ್ಥಿಕ ಮತ್ತು ಸಾಮಾಜಿಕ ನ್ಯಾಯ ಒದಗಿಸಿದಂತಾಗುತ್ತದೆ.

	ಅನಭಿವರ್ಧಿತ ರಾಷ್ಟ್ರದಲ್ಲಿ ಖಾಸಗಿ ವಿನಿಯೋಜನೆಯ ಗಾತ್ರ ಬಹಳ ಕಡಿಮೆ. ಆದ್ದರಿಂದ ಸರ್ಕಾರವೇ ವಿನಿಯೋಜನೆಯನ್ನು ಕೈಗೊಳ್ಳಬೇಕು. ಆರ್ಥಿಕ ಯೋಜನೆಗಳನ್ನು ಅನುಷ್ಠಾನಕ್ಕೆ ತರುವುದರ ಮೂಲಕ ಸರ್ಕಾರ ಮೂಲ ಮತ್ತು ಮುಖ್ಯ ಉದ್ಯಮಗಳಲ್ಲಿ ಸಾಕಷ್ಟು ಗಾತ್ರದಲ್ಲಿ ಬಂಡವಾಳ ಹೂಡಿ ಕ್ಷಿಪ್ರಗತಿಯಲ್ಲಿ ಆರ್ಥಿಕ ಅಭಿವೃದ್ಧಿ ಸಾಧಿಸುವಲ್ಲಿ ಮಹತ್ತ್ವದ ಪಾತ್ರ ವಹಿಸಬೇಕು. ಇದಕ್ಕೆ ತಕ್ಕ ಕೋಶೀಯ ನೀತಿಯನ್ನು ಸರ್ಕಾರ ಜಾರಿಗೆ ತರಬೇಕು. ತೆರಿಗೆಗಳು, ಸಾರ್ವಜನಿಕ ಸಾಲಗಳು, ಮತ್ತು ಕೊರತೆಯ ಹಣ ವಿನಿಯೋಗ ಇವು ಕೋಶೀಯ ನೀತಿಯ ಮೂರು ಮಹತ್ತ್ವ ಅಂಗಗಳು. ಆರ್ಥಿಕಾಭಿವೃದ್ಧಿಯನ್ನು ಸಾಧಿಸುತ್ತ ಪೂರ್ಣೋದ್ಯೋಗ ಸ್ಥಿತಿಯನ್ನು ಸ್ಥಾಪಿಸುವ ಕಾಲದಲ್ಲಿ ರಾಷ್ಟ್ರದಲ್ಲಿ ಹಣದ ಅತಿಪ್ರಸರಣ ಸಂಭವಿಸದಂತೆ ನೋಡಿಕೊಳ್ಳಬೇಕು. ಅದಕ್ಕೆ ತಕ್ಕಂತೆ ಕೋಶೀಯ ನೀತಿಯನ್ನು ರೂಪಿಸಿಕೊಳ್ಳಬೇಕು. ಕೋಶೀಯ ನೀತಿಯ ಮೂರು ಅಂಗಗಳಲ್ಲಿ ತೆರಿಗೆ ನೀತಿ ತುಂಬ ಮಹತ್ತ್ವದ್ದು. ಅದರ ಉದ್ದೇಶಗಳು ಹೀಗಿರಬೇಕು : 1. ಅನುಭೋಗವನ್ನು ತಗ್ಗಿಸಿ ಉಳಿತಾಯ ಮತ್ತು ವಿನಿಯೋಜನೆಗಳನ್ನು ಹೆಚ್ಚಿಸುವುದು; 2. ಸರ್ಕಾರಿ ವಲಯದಲ್ಲಿ ಬಂಡವಾಳ ವಿನಿಯೋಜನೆಯ ಗಾತ್ರವನ್ನು ಹೆಚ್ಚಿಸಲು ಸರ್ಕಾರ ಸಾರ್ವಜನಿಕರಿಂದ ಹೆಚ್ಚಿನ ಪರಿಮಾಣದಲ್ಲಿ ಸಂಪನ್ಮೂಲಗಳನ್ನು ಸಂಗ್ರಹಿಸುವುದು; 3. ಖಾಸಗಿ ವ್ಯಕ್ತಿಗಳಿಗೆ ಮತ್ತು ಸಂಸ್ಥೆಗಳಿಗೆ ಉಳಿತಾಯ ಮಾಡಲು ಮತ್ತು ಬಂಡವಾಳ ಹೂಡಲು ಉತ್ತೇಜನ ನೀಡುವುದು; 4. ವರಮಾನ ಮತ್ತು ಸಂಪತ್ತಿನ ವಿತರಣೆಯಲ್ಲಿಯ ಅಸಮಾನತೆಯನ್ನು ತಗ್ಗಿಸುವುದು; ಕೊರತೆಯ ಹಣ ವಿನಿಯೋಗವನ್ನು ಆರ್ಥಿಕಾಭಿವೃದ್ಧಿಗೆ ಮತ್ತು ಪೂರ್ಣೋದ್ಯೋಗ ಸಾಧನೆಗೆ ಉಪಯೋಗಿಸಬಹುದು. ಕೊರತೆಯ ಹಣ ವಿನಿಯೋಗದ ಅನುಸರಣೆಯ ಬಗ್ಗೆ ತುಂಬ ಎಚ್ಚರಿಕೆ ವಹಿಸಬೇಕು. ಅದನ್ನು ಅತಿಯಾಗಿ ಉಪಯೋಗಿಸಿದರೆ ಹಣದ ಅತಿ ಪ್ರಸರಣ ಮತ್ತು ಬೆಲೆ ಏರಿಕೆ ಸಂಭವಿಸುತ್ತವೆ. ಕೊರತೆಯ ಹಣ ವಿನಿಯೋಗದ ಉಪಾಯವನ್ನು ಹಾಳತವಾಗಿ ಅನುಸರಿಸಿದರೆ ಆರ್ಥಿಕಾಭಿವೃದ್ಧಿ, ಅದು ಪ್ರೇರಕ ಶಕ್ತಿಯಾಗುತ್ತದೆ.

	ಅನಭಿವರ್ಧಿತ ರಾಷ್ಟ್ರದಲ್ಲಿ ಕೋಶೀಯ ನೀತಿಗೆ ಕೆಲವು ಮಿತಿಗಳುಂಟು. ಅಭಿವರ್ಧಿತ ರಾಷ್ಟ್ರದಲ್ಲಿ ಕೋಶೀಯ ನೀತಿಯಲ್ಲಾಗುವ ಬದಲಾವಣೆಗಳಿಗೆ ಆರ್ಥಿಕತೆ ಬೇಗ ಹೊಂದಿಕೊಳ್ಳುತ್ತದೆ. ಏಕೆಂದರೆ ಅಲ್ಲಿಯ ಆರ್ಥಿಕತೆ ಸುಸಂಘಟಿತವಾದ್ದು. ಅನಭಿವರ್ಧಿತ ರಾಷ್ಟ್ರದಲ್ಲಿ ಆರ್ಥಿಕತೆ ಸುಸಂಘಟಿತವಲ್ಲ. ಅನಭಿವರ್ಧಿತ ದೇಶದ ಆರ್ಥಿಕತೆಯ ಬಹುಭಾಗ ಹಣರಹಿತ ವಲಯ. ಕೋಶೀಯ ನೀತಿ ನಿಯಂತ್ರಣಕ್ಕೆ ಈ ವಲಯ ಒಳಪಡುವುದಿಲ್ಲ. ಅನಭಿವರ್ಧಿತ ದೇಶದಲ್ಲಿ ಬಂಡವಾಳದ ಕೊರತೆ ಇರುತ್ತದೆ. ಆರ್ಥಿಕ ಅಭಿವೃದ್ಧಿಗೆ ಅಗತ್ಯವಾದ ಸಾಂಸ್ಥಿಕ ಚೌಕಟ್ಟು ಅಧೋರಚನೆ ಇರುವುದಿಲ್ಲ. ಇದರ ಅಭಾವ ಹಣದುಬ್ಬರಕ್ಕೆ ಕಾರಣವಾಗುತ್ತದೆ.

	ಪೂರ್ಣೋದ್ಯೋಗದ ಸ್ಥಾಪನೆಗೆ ಹಣ ನೀತಿ ಮತ್ತು ಕೋಶೀಯ ನೀತಿಗಳಷ್ಟೇ ಅಲ್ಲದೆ ವೇತನ ಕಡಿತ ನೀತಿ, ಬೆಲೆ ಬೆಂಬಲ ನೀತಿ ಮತ್ತು ಕಾರ್ಮಿಕ ಮಾರುಕಟ್ಟೆಯ ಅಸಂಬದ್ಧತೆಗಳ ನಿವಾರಣೆ ಇವೂ ಅಗತ್ಯ. ವೇತನಗಳ ಕಡಿತದಿಂದ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಬಹುದು ಎಂಬುದು ಕೆಲವು ಅರ್ಥಶಾಸ್ತ್ರಜ್ಞರ ಅಭಿಪ್ರಾಯ. ಏಕೆಂದರೆ ಆರ್ಥಿಕ ಗರ್ತದ ಕಾಲದಲ್ಲಿ ವೇತನಗಳ ಕಡಿತ ಖಾಸಗಿ ವಿನಿಯೋಜನೆಗಳನ್ನು ಹೆಚ್ಚಿಸಲು ಉದ್ಯಮಗಳಿಗೆ ಉತ್ತೇಜನ ನೀಡುತ್ತದೆ. ಆಗ ಬೆಲೆಗಳು ವಿಪರೀತ ಇಳಿದಿರುತ್ತವೆ. ಸರ್ಕಾರ ಹೆಚ್ಚಿನ ಪರಿಮಾಣದಲ್ಲಿ ಯುಕ್ತ ಬೆಲೆಗಳಲ್ಲಿ ಸರಕುಗಳನ್ನು ಕೊಳ್ಳಬೇಕು. ಅವುಗಳ ದಾಸ್ತಾನು ಇಡಬೇಕು. ಈ ಕ್ರಮದಿಂದ ಬೆಲೆ ಇಳಿಯುವುದನ್ನು ತಡೆದಂತಾಗುತ್ತದೆ. ಅನುಭೋಗ ಮತ್ತು ಉತ್ಪಾದಕ ಸರಕುಗಳ ವಿಷಯದಲ್ಲಿ ಹೀಗೆ ಬೆಲೆ ಬೆಂಬಲ ನೀತಿ ಅನುಸರಿಸುವುದರಿಂದ ಉದ್ಯಮಿಗಳಲ್ಲಿ ವಿಶ್ವಾಸವನ್ನು ಮೂಡಿಸಲು ಮತ್ತು ಅವರು ಔದ್ಯಮಿಕ ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡಲು ಸಾಧ್ಯವಾಗುತ್ತದೆ. ಕಾರ್ಮಿಕ ಮಾರುಕಟ್ಟೆಯನ್ನು ಸುವೈವಸ್ಥಿತಗೊಳಿಸುವುದರಿಂದ ನಿರುದ್ಯೋಗವನ್ನು ನಿವಾರಿಸಲು ಸಾಧ್ಯವಾಗುತ್ತದೆ. ಘರ್ಷಣಾತ್ಮಕ ನಿರುದ್ಯೋಗ ಸ್ಥಿತಿ ಇದ್ದಾಗ ಉದ್ಯೋಗಾವಕಾಶಗಳ ಮಾಹಿತಿ ಅಲಭ್ಯವಿರುವುದರಿಂದ ಅನೇಕ ಉದ್ಯೋಗಾರ್ಥಿಗಳು ನಿರುದ್ಯೋಗಿಗಳಾಗಿರುತ್ತಾರೆ. ಅಂಥವರು ಯುಕ್ತ ಉದ್ಯೋಗ ಪಡೆಯಲು ಉದ್ಯೋಗ ವಿನಿಮಯ ಕೇಂದ್ರಗಳು ನೆರವಾಗುತ್ತವೆ. ಕೌಶಲ ತರಬೇತು ಇವುಗಳ ಅಭಾವದಿಂದ ಕೆಲವು ಸಲ ನಿರುದ್ಯೋಗ ಸಂಭವಿಸುತ್ತದೆ. ಆಗ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿ, ತರಬೇತು ಕಾರ್ಯಕ್ರಮಗಳನ್ನು ಪ್ರಾರಂಭಿಸಿ ಉದ್ಯೋಗಾರ್ಥಿಗಳು ಉದ್ಯೋಗ ಪಡೆಯಲು ನೆರವು ನೀಡಿ ನಿರುದ್ಯೋಗದ ನಿವಾರಣೆ ಮಾಡಬಹುದು. ಶ್ರಾಯೀಣ ಕೈಗಾರಿಕೆಗಳು ಇರುವೆಡೆಗಳಲ್ಲಿ ಆ ಕೈಗಾರಿಕೆಗಳು ಉತ್ಪಾದನ ಕಾರ್ಯದಲ್ಲಿ ನಿರತರಾಗಿರುವಾಗ ಅವುಗಳ ಕಾರ್ಮಿಕರಿಗೆ ಉದ್ಯೋಗ ಒದಗಿಸಬಲ್ಲ ಪೂರಕ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸುವುದರಿಂದ ಇಂಥ ನಿರುದ್ಯೋಗ ಸಮಸ್ಯೆಯನ್ನು ಎದುರಿಸುವುದು ಸಾಧ್ಯ.

	ಪೂರ್ಣೋದ್ಯೋಗ ಸ್ಥಿತಿ ಪ್ರಾಪ್ತಿಗೆ ಅಂತರರಾಷ್ಟ್ರೀಯ ಸಹಕಾರವೂ ಅಗತ್ಯ ಎನ್ನವುದು ಕುರಿಹರ ಅವರ ಅಭಿಪ್ರಾಯ. ಪೂರ್ಣೋದ್ಯೋಗವನ್ನು ಸಾಧಿಸಬಯಸುವ ಅಭಿವೃದ್ಧಿಶೀಲ ದೇಶಕ್ಕೆ ಜಗತ್ತಿನ ಕೈಗಾರಿಕಾ ರಾಷ್ಟ್ರಗಳು ಹಣದ ನೆರವನ್ನೂ ವಾಣಿಜ್ಯ ಮತ್ತು ರಾಜಕೀಯ ಸಹಕಾರವನ್ನೂ ನೀಡದಿದ್ದರೆ ಅಂಥ ದೇಶದಲ್ಲಿ ಪೂರ್ಣೋದ್ಯೋಗ ಸಾಧ್ಯವಾಗದು ಎನ್ನುತ್ತಾರೆ ಅವರು.				(ಡಿ.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ